

ಬೆಂಗಳೂರು: ಕಳೆದ ಒಂದೆರಡು ವರ್ಷಗಳಿಂದ ಕರೊನಾ ಬಹುತೇಕ ಎಲ್ಲವನ್ನೂ ತಡೆದಿದೆ. ಅದೆಷ್ಟೋ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ. ಅದರಲ್ಲಿ ಸಿನಿಮಾ ಸ್ಟಾರ್ಗಳ ಜನ್ಮದಿನಾಚರಣೆ ಕೂಡ ಸೇರಿದೆ. ಕಳೆದ ಎರಡು ವರ್ಷಗಳಿಂದ ಬಹುತೇಕ ಎಲ್ಲ ಸಿನಿಮಾ ಸ್ಟಾರ್ಗಳು ಎಂದಿನಂತೆ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿಲ್ಲ.
ಸಿನಿಮಾ ಸ್ಟಾರ್ಗಳ ಪಾಲಿಗೆ ಜನ್ಮದಿನವೆಂದರೆ ಕಲಾವಿದ ಹಾಗೂ ಅಭಿಮಾನಿಗಳ ಸಮಾಗಮದ ದಿನದಂತೆ. ಅಂದು ರಾಜ್ಯದ ಮೂಲೆಮೂಲೆಗಳಿಂದ ಅದೆಷ್ಟೋ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಅವರ ಮನೆ ಮುಂದೆ ಜಮಾಯಿಸುತ್ತಾರೆ. ಆದರೆ ಕರೊನಾ ಹಿನ್ನೆಲೆಯಲ್ಲಿ ಹೀಗೆ ಸಾರ್ವಜನಿಕವಾಗಿ ಜನ್ಮದಿನ ಆಚರಿಸಿಕೊಳ್ಳದ ಸ್ಟಾರ್ನಟರು ಮನೆ ಬಳಿಗೆ ಬರದಂತೆ ಅಭಿಮಾನಿಗಳಿಗೂ ಕಳೆದೆರಡು ವರ್ಷಗಳಲ್ಲಿ ಮನವಿ ಮಾಡಿಕೊಂಡಿದ್ದರು.
ಆದರೆ ಇದೀಗ ರವಿಚಂದ್ರನ್ ಪುತ್ರ ಮನುರಂಜನ್ ತಮ್ಮ ಜನ್ಮದಿನವನ್ನು ಅಭಿಮಾನಿಗಳ ಜತೆ ಮನೆ ಬಳಿಯೇ ಆಚರಿಸಿಕೊಳ್ಳಲು ಒಪ್ಪಿದ್ದಾರಂತೆ. 'ಅಭಿಮಾನಿಗಳ ಪ್ರೀತಿಗೆ ಮಣಿದ ಯಂಗ್ ಕ್ರೇಜಿ ಸ್ಟಾರ್ ಅಭಿಮಾನಿಗಳ ಜತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ಒಪ್ಪಿದ್ದಾರೆ. ಡಿ. 11ರಂದು ರಾಜಾಜಿನಗರ ರವಿಕಲಾ ನಿವಾಸದಲ್ಲಿ ಈ ಜನ್ಮದಿನಾಚರಣೆ ನಡೆಯಲಿದೆ. ಎಲ್ಲ ಅಭಿಮಾನಿಗಳು ಬರಬಹುದು' ಎಂದು ರವಿಚಂದ್ರನ್ ಮತ್ತು ಮನುರಂಜನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.