

ಮಂಗಳೂರು: ಹೊಸ ವರ್ಷಕ್ಕೆ ಮಂಗಳೂರಿನ ನೂತನ ಪೊಲೀಸ್ ಆಯುಕ್ತರಾಗಿ ಎನ್.ಶಶಿಕುಮಾರ್ ನೇಮಕಗೊಂಡಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತರಾಗಿದ್ದ ವಿಕಾಶ್ ಕುಮಾರ್ ವಿಕಾಶ್ ಅವರನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಡಿಐಜಿ ಆಗಿ ವರ್ಗಾಯಿಸಲಾಗಿದೆ.
ಕಳೆದ ಜೂನ್ 29ರಂದು ಅಧಿಕಾರ ವಹಿಸಿಕೊಂಡಿದ್ದ ವಿಕಾಶ್ ಕುಮಾರ್ ಅವರನ್ನು ಕೇವಲ 6 ತಿಂಗಳಲ್ಲೇ ವರ್ಗಾಯಿಸಲಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ವಿಕಾಶ್ ಕುಮಾರ್ ಅವರ ಕಾರ್ಯವೈಖರಿ ಬಗ್ಗೆ ಮಂಗಳೂರಿನ ಸಂಸದ, ಶಾಸಕರ ವಲಯದಲ್ಲಿ ತೀವ್ರ ಅಸಮಾಧಾನವಿದ್ದುದು ವರ್ಗಾವಣೆಗೆ ಕಾರಣ ಎನ್ನಲಾಗಿದೆ. ಜನವರಿ 1ರಿಂದಲೇ ಅನ್ವಯವಾಗುವಂತೆ ಹೊಸ ವರ್ಗಾವಣೆ ನಡೆದಿದೆ.
ಎನ್.ಶಶಿಕುಮಾರ್ ಅವರು ಚಿತ್ರದುರ್ಗ ಮೂಲದವರಾಗಿದ್ದು 2007ನೇ ಬ್ಯಾಚ್‌ನ ಅಧಿಕಾರಿ. ಬಿಎಸ್ಸಿ ಕೃಷಿ ಪದವೀಧರರು. ಈ ಮೊದಲು ಬೆಂಗಳೂರು ಉತ್ತರ ಡಿಸಿಪಿ ಆಗಿ, ವೈರ್‌ಲೆಸ್ ವಿಭಾಗದ ಎಸ್‌ಪಿ ಆಗಿ ಕಾರ್ಯನಿರ್ವಹಿಸಿದ್ದಾರೆ.
ಇದೇ ವೇಳೆ ಮಂಗಳೂರಿನ ಡಿಸಿಪಿ(ಕಾನೂನು ಸುವ್ಯವಸ್ಥೆ) ಪ್ರಭಾರ ಆಗಿದ್ದ ಹರಿರಾಮ್ ಶಂಕರ್ ಅವರ ಅಧಿಕೃತ ನೇಮಕ ಆದೇಶವೂ ಪ್ರಕಟವಾಗಿದೆ. ಈ ಹಿಂದೆ ಕುಂದಾಪುರ ಎಎಸ್ಪಿ ಆಗಿದ್ದ ಹರಿರಾಂ ಇತ್ತೀಚೆಗಷ್ಟೇ ಮಂಗಳೂರಿಗೆ ವರ್ಗಾವಣೆಯಾಗಿ ಬಂದು ಪ್ರಭಾರ ವಹಿಸಿದ್ದರು.