

ಮಳವಳ್ಳಿ: ಪಟ್ಟಣದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘವು 2025-26ನೇ ಸಾಲಿನಲ್ಲಿ ವಾರ್ಷಿಕ 24 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ತೊಟ್ಟಿಮನೆ ಎಚ್.ಚನ್ನಪ್ಪ ತಿಳಿಸಿದರು.
ಪಟ್ಟಣದ ಕೋಟೆ ಬಳಿಯ ನೂತನ ಶ್ರೀ ಬಸವೇಶ್ವರ ರಜತ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಂಘದ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಂಘದ ಸದಸ್ಯರ ಸಹಕಾರದಿಂದ ಸಂಘವು ದಿನೇ ದಿನೆ ಪ್ರಗತಿ ಕಾಣುತ್ತಿದೆ. ಸಂಘದ ವತಿಯಿಂದ ನಿರ್ಮಾಣಗೊಂಡಿರುವ ರಜತ ಭವನದಲ್ಲಿ ಕೆಲವು ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಇದ್ದು, ಅವುಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಕೆಲವೇ ದಿನಗಳಲ್ಲಿ ನೀಡಲಾಗುವುದು. ಸಂಘದ ಅಭಿವೃದ್ಧಿಗೆ ಸದಸ್ಯರು ಇನ್ನಷ್ಟು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪ್ರಸ್ತುತ ಸಾಲಿನಲ್ಲಿ ಶೈಕ್ಷಣಿಕ ಸಾಧನೆ ಮಾಡಿರುವ ಷೇರುದಾರರ ಮಕ್ಕಳನ್ನು ಅಭಿನಂದಿಸಿ ಗೌರವಿಸಲಾಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಬಿ.ನಾಗರಾಜು ಸಭೆಯಲ್ಲಿ ಸಂಘದ ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು.
ಸಂಘದ ಉಪಾಧ್ಯಕ್ಷ ಎಚ್.ಸಿ.ಮಹೇಶ್, ನಿರ್ದೇಶಕರಾದ ಸುಬ್ಬಣ, ಬೆಳಕವಾಡಿ ಜಯಶಂಕರ್, ಜಗದೀಶ್, ರಮೇಶ್, ಬಸವರಾಜು, ಹಂಗ್ರಾಪುರ ಜಯಶಂಕರ್, ವೃಷಭೇಂದ್ರ, ಮೋಹನ, ಕಲ್ಪನಾ, ಅಮೃತಾ, ನಂದಿನಿ ಉಪಸ್ಥಿತರಿದ್ದರು.