ಕುವೆಂಪುಗೆ ಮರಣೋತ್ತರ ಭಾರತ ರತ್ನ ಘೋಷಿಸಲಿ

ಶ್ರೀರಂಗಪಟ್ಟಣದ ಕುವೆಂಪು ವೃತ್ತದಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನವ ಕುವೆಂಪು ಜನ್ಮದಿನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ವಿಜಯಲಕ್ಷ್ಮಮ್ಮ ಬಂಡಿಸಿದ್ದೇಗೌಡ, ಡಾ.ಬಿ.ಸುಜಯ್ ಕುಮಾರ್, ಎಸ್.ಎಂ.ನಾಗರಾಜು ಇದ್ದರು.
ಶ್ರೀರಂಗಪಟ್ಟಣದ ಕುವೆಂಪು ವೃತ್ತದಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನವ ಕುವೆಂಪು ಜನ್ಮದಿನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ವಿಜಯಲಕ್ಷ್ಮಮ್ಮ ಬಂಡಿಸಿದ್ದೇಗೌಡ, ಡಾ.ಬಿ.ಸುಜಯ್ ಕುಮಾರ್, ಎಸ್.ಎಂ.ನಾಗರಾಜು ಇದ್ದರು.
Published on
ಶ್ರೀರಂಗಪಟ್ಟಣ: ತಮ್ಮ ಸಾಹಿತ್ಯದ ಮೂಲಕ ವಿಶ್ವಮಾನವ ಪ್ರಜ್ಞೆ ಮೂಡಿಸಿದ ರಾಷ್ಟ್ರಕವಿ ಕುವೆಂಪು ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಒತ್ತಾಯಿಸಿದರು.
ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಸೋಮವಾರ ವಿಶ್ವಮಾನವ ಕುವೆಂಪು ಜಯಂತಿ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಕುವೆಂಪು ಅವರ 121ನೇ ಜನ್ಮದಿನ ಹಾಗೂ ಕುವೆಂಪು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
1935ರಲ್ಲಿ ಸಮಸಮಾಜ ನಿರ್ಮಾಣಕ್ಕೆ ನಿರಂಕುಶಮತಿಗಳಾಗಿ ಎಂದು ಕರೆ ನೀಡಿದ ಕುವೆಂಪು ಅವರ ಭಾಷಣದ ವಿಚಾರಕ್ರಾಂತಿ ಮೊಟ್ಟಮೊದಲು ಆರಂಭವಾಗಿದ್ದು ಶ್ರೀರಂಗಪಟ್ಟಣದಲ್ಲಿ. ನಾಡಗೀತೆ ರಚನೆಯಾಗಿ 100 ವರ್ಷ ಪೂರೈಸುತ್ತಿರುವ ಸುಸಂದರ್ಭದಲ್ಲಿ ಕುವೆಂಪು ಅವರ ಜಯಂತಿ ಸ್ಮರಣೆ ಈ ನೆಲದಲ್ಲಿ ಅತ್ಯಂತ ಮಹತ್ವಪೂರ್ಣ ಎಂದರು.
ರಸಋಷಿ ತಮ್ಮ 25ನೇ ವಯಸ್ಸಿನಲ್ಲೇ ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಸಂದೇಶದ ಮೂಲಕ ವಿಶ್ವಮಾನವ ಪ್ರಜ್ಞೆ ಭಾರತೀಯರ ಪ್ರಜ್ಞೆಯನ್ನು ಜಗತ್ತಿನಾದ್ಯಂತ ಹೆಚ್ಚಿಸಲು ಒಂದು ನಿದರ್ಶನವಾಗಿದೆ. ಜಾತಿ, ಧರ್ಮ, ಮತ ಪಂಥಗಳಿಂದ ಹೊರಬಂದು ನಿನ್ನಂತೆಯೇ ಇತರರನ್ನು ಪ್ರೀತಿಸು, ಜೀವ ಸೇವೆಯೇ ದೈವ ಸೇವೆ ಎನ್ನುವ ಮಾನತತ್ವ ಸಾರಿದ ಇಂತಹ ಮೇರು ವ್ಯಕ್ತಿತ್ವದ ಜಗದ ಕವಿಗೆ ಭಾರತ ರತ್ನ ಮಾತ್ರವಲ್ಲ ನೊಬೆಲ್ ಪ್ರಶಸ್ತಿಗೂ ಅರ್ಹರಾಗಿದ್ದರು. ಪ್ರಸ್ತುತ ಪರಿಸ್ಥಿತಿಯಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಯುವ ಸಮುದಾಯ ಮುಂದಾಗಬೇಕು. ಮನುಜ ಧರ್ಮವನ್ನು ನಿರ್ಮಿಸಿ ವಿಶ್ವಮಾನವ ಸಂದೇಶ ಸಾರಬೇಕು ಎಂದರು.
ಹಿರಿಯ ಗಾಂಧಿವಾದಿ ಡಾ.ಬಿ.ಸುಜಯ್ ಕುಮಾರ್ ಮಾತನಾಡಿ, ರಾಮಕೃಷ್ಣ ಪರಮಹಂಸರು ಹಾಗೂ ಸ್ವಾಮಿ ವಿವೇಕಾನಂದರ ಆದರ್ಶ ನೀತಿಯಡಿ ಕುವೆಂಪು ಅವರ ವಿಚಾರಧಾರೆ ಮಾನವೀಯ ನೀತಿ ಹಾಗೂ ಕಾಯಕ ನೀತಿಯನ್ನು ಬೆಂಬಲಿಸಿ ಸಮಾನತೆಯ ಹಾದಿಯನ್ನು ಜ್ಞಾನರ್ಜನೆಯಿಂದ ಬೆಳೆಸಿಕೊಳ್ಳುವಂತೆ ಮಾಡಿದರು ಎಂದು ತಿಳಿಸಿದರು.
ಮಾಜಿ ಶಾಸಕಿ ವಿಜಯಲಕ್ಷ್ಮಮ್ಮ ಬಂಡಿಸಿದ್ದೇಗೌಡ ಮಾತನಾಡಿದರು. ಈ ವೇಳೆ ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರಿಗೆ ಸಮಿತಿಯಿಂದ ಕುವೆಂಪು ಭವನ ನಿರ್ಮಾಣಕ್ಕೆ ನಿವೇಶನ ಹಾಗೂ ಅನುದಾನ ನೀಡುವಂತೆ ಒತ್ತಾಯಿಸಿ ಮಾಜಿ ಶಾಸಕಿ ಅವರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ವಿವಿಧ ಕ್ಷೇತ್ರದ ಸಾಧಕರಿಗೆ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಲಾಯಿತು. ರೈತ ಮುಖಂಡ ಕೂಡಲಕುಪ್ಪೆ ನಾಗೇಂದ್ರಸ್ವಾಮಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಂ.ನಾಗರಾಜು, ಪಿಕಾರ್ಡ್‌ಬ್ಯಾಂಕ್ ಅಧ್ಯಕ್ಷ ನೆಲಮನೆ ಚೆಲುವೇಗೌಡ, ಓಂ ಶ್ರೀನಿಕೇತನ ಹಾಗೂ ಪರಿವರ್ತನ ಟ್ರಸ್ಟ್ ಮುಖ್ಯಸ್ಥೆ ಆಶಾಲತಾ ಪುಟ್ಟೇಗೌಡ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಸಿದ್ದಲಿಂಗು, ಪುರಸಭಾ ಮಾಜಿ ಅಧ್ಯಕ್ಷ ಎಂ.ಎಲ್.ದಿನೇಶ್, ಸದಸ್ಯ ಗಂಜಾಂ ಕೃಷ್ಣಪ್ಪ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲೋಕೇಶ್, ಕುವೆಂಪು ಆಚರಣಾ ಸಮಿತಿ ಅಧ್ಯಕ್ಷ ಸಿ.ಸ್ವಾಮಿಗೌಡ, ಉದ್ಯೋಗದಾತ ಸಂಸ್ಥೆಯ ರುಕ್ಮಾಂಗದ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net