ಮದ್ದೂರು ನಗರದ ಚನ್ನೇಗೌಡ ವಿದ್ಯಾಸಂಸ್ಥೆಯ ತಾಯಿ ನೆಸ್ಟ್ ಶಾಲೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶ್ರೀ ವೀರೇಶಾನಂದ ಸ್ವಾಮೀಜಿ, ಸ್ವರೂಪ್ ಚಂದ್, ಅಪೂರ್ವಚಂದು, ಧನಂಜಯ, ಶಿವಕುಮಾರ್, ರವಿ, ಕೃಷ್ಣ, ಚಂದ್ರಶೇಖರ್, ವರದರಾಜು ಇದ್ದರು.
ಮದ್ದೂರು: ಮೌಲ್ಯಯುತ ಶಿಕ್ಷಣವನ್ನು ಶಾಲೆಗಳು ವಿದ್ಯಾರ್ಥಿಗಳಿಗೆ ನೀಡಬೇಕು,ಅಕ್ಷರಾಭ್ಯಾಸ ಎಂದರೆ ಮಗುವಿಗೆ ಶಿಕ್ಷಣ ಮತ್ತು ಜ್ಞಾನದ ಜಗತ್ತನ್ನು ಪರಿಚಯಿಸುವ ಪವಿತ್ರ ಹಿಂದೂ ಸಂಪ್ರದಾಯವಾಗಿದೆ ಎಂದು ತುಮಕೂರಿನ ರಾಮಕೃಷ್ಣ ಮಠದ ಪೀಠಾಧ್ಯಕ್ಷ ಶ್ರೀ ವೀರೇಶಾನಂದ ಸ್ವಾಮೀಜಿ ತಿಳಿಸಿದರು.
ನಗರದ ಚನ್ನೇಗೌಡ ವಿದ್ಯಾಸಂಸ್ಥೆಯ ತಾಯಿ ನೆಸ್ಟ್ ಶಾಲೆಯಲ್ಲಿ ಗುರುವಾರ ಆಯೋಜಿಸಿಲಾಗಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು.ಅಕ್ಷರಾಭ್ಯಾಸದಿಂದ ಮಗುವಿಗೆ ಜ್ಞಾನದ ದೇವತೆಯಾದ ಸರಸ್ವತಿ ಮತ್ತು ಗಣಪತಿಯ ಆಶೀರ್ವಾದ ಸಿಗುತ್ತದೆ. ಮಗುವಿಗೆ 2 ರಿಂದ 5 ವರ್ಷ ತುಂಬಿದ ನಂತರ ಇದನ್ನು ಮಾಡಿಸುವುದು ವಾಡಿಕೆಯಾಗಿದೆ, ಇದರಿಂದ ಮಕ್ಕಳಿಗೆ ನಮ್ಮ ಸಂಸ್ಕಾರ, ಸಂಸ್ಕೃತಿ, ಆಚಾರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಮಾರ್ಗವಾಗುತ್ತದೆ ಎಂದರು.
ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಮಕ್ಕಳನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವುದರಿಂದ ಸಮಾಜಕ್ಕೆ ಕೊಡುಗೆಯನ್ನಾಗಿಸಬೇಕು ಹಾಗೆ ಮಾಡಿದರೆ ನೂರು ಜೈಲುಗಳು ತೆರೆಯುವುದನ್ನು ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟರು.
ಮಕ್ಕಳು ಉತ್ತಮ ಶಿಕ್ಷಣ ಪಡೆಯುವುದರ ಮೂಲಕ ಸತ್ಪ್ರಜೆ ಗಳಾಗಬೇಕು, ಪಾಲಕರಿಗೆ ಹಾಗೂ ಸಮಾಜಕ್ಕೆ ರತ್ನಗಳಾಗಬೇಕು ಅಷ್ಟೇ ಅಲ್ಲದೇ ಭಾರತ ರತ್ನರಾಗುವ ಗುರಿಹೊಂದಬೇಕು ಎಂದ ಅವರು
ಹೆಚ್ಚು ಪೆಟ್ಟು ತಿಂದ ಕಲ್ಲು ವಿಗ್ರಹವಾಗುವ ಹಾಗೆ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಅವಧಿಯಲ್ಲಿ ಕಷ್ಟ ಪಟ್ಟು ಓದಿ ಮುಂದೆ ಬರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ತಂದೆ ತಾಯಿಯರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಮಕ್ಕಳೊಂದಿಗೆ ಗಣೇಶ ಸರಸ್ವತಿ ಶ್ಲೋಕಗಳೊಂದಿಗೆ ಅಕ್ಷರಾಭ್ಯಾಸದಲ್ಲಿ ಪಾಲ್ಗೊಂಡು ಗಮನಸೆಳೆದರು.
ಸಂಸ್ಥೆಯ ಅಧ್ಯಕ್ಷ ಸ್ವರೂಪ್ ಚಂದ್, ಕಾರ್ಯದರ್ಶಿ ಅಪೂರ್ವ ಚಂದು, ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ, ಎಚ್.ಕೆ.ವೀರಣ್ಣಗೌಡ ಕಾಲೇಜಿನ ಪ್ರಾಂಶುಪಾಲ ಶಿವಕುಮಾರ್, ಆಡಳಿತಾಧಿಕಾರಿ ರವಿ, ಮುಖ್ಯ ಶಿಕ್ಷಕರಾದ ಕೃಷ್ಣ, ಚಂದ್ರಶೇಖರ್, ವರದರಾಜು, ಮಹೇಶ್ ಸೇರಿದಂತೆ ಶಾಲೆಯ ಶಿಕ್ಷಕರು ಪಾಲ್ಗೊಂಡಿದರು.