ಕಾಂಗ್ರೆಸ್ ವಿರುದ್ಧ ಮೈತ್ರಿ ಪಕ್ಷದಿಂದ ಪ್ರತಿಭಟನೆ

ಮಳವಳ್ಳಿ ತಾಲೂಕು ಕಚೇರಿ ಮುಂದೆ ಶುಕ್ರವಾರ ಮಾಜಿ ಶಾಸಕ ಡಾ.ಕೆ.ಅನ್ನದಾನಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಮಹಿಳಾ ಮಸೂದೆಯನ್ನು ಮರು ಚರ್ಚೆ ಮಾಡಿ ಜಾರಿಗೆ ತರುವಂತೆ ಆಗ್ರಹಿಸಿದ ಮನವಿ ಪತ್ರವನ್ನು ರಾಜ್ಯಪಾಲರಿಗೆ ರವಾನಿಸಲು ತಹಸೀಲ್ದಾರ್ ಡಾ.ಲೋಕೇಶ್ ಅವರಿಗೆ ನೀಡಿದರು.  ಹನುಮಂತು, ಸಿದ್ದಾಚಾರಿ, ಪದ್ಮಮ್ಮ, ಅನಿತಾ, ಉಮಾ, ನಂದಕುಮಾರ್, ಮಧುಗಂಗಾಧರ್, ಕಾಂತರಾಜು, ಮಧು ಇದ್ದರು.
ಮಳವಳ್ಳಿ ತಾಲೂಕು ಕಚೇರಿ ಮುಂದೆ ಶುಕ್ರವಾರ ಮಾಜಿ ಶಾಸಕ ಡಾ.ಕೆ.ಅನ್ನದಾನಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಮಹಿಳಾ ಮಸೂದೆಯನ್ನು ಮರು ಚರ್ಚೆ ಮಾಡಿ ಜಾರಿಗೆ ತರುವಂತೆ ಆಗ್ರಹಿಸಿದ ಮನವಿ ಪತ್ರವನ್ನು ರಾಜ್ಯಪಾಲರಿಗೆ ರವಾನಿಸಲು ತಹಸೀಲ್ದಾರ್ ಡಾ.ಲೋಕೇಶ್ ಅವರಿಗೆ ನೀಡಿದರು. ಹನುಮಂತು, ಸಿದ್ದಾಚಾರಿ, ಪದ್ಮಮ್ಮ, ಅನಿತಾ, ಉಮಾ, ನಂದಕುಮಾರ್, ಮಧುಗಂಗಾಧರ್, ಕಾಂತರಾಜು, ಮಧು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಮೀಸಲಾತಿ ವಿರೋಧಿಸಿದ್ದಕ್ಕೆ ಆಕ್ರೋಶ
  • ಮಳವಳ್ಳಿಯಲ್ಲಿ ರ್ಯಾಲಿ
ಮಳವಳ್ಳಿ: ಕೇಂದ್ರ ಸರ್ಕಾರ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ಮಸೂದೆಯನ್ನು ಮಂಡಿಸಿದ್ದು, ಇದನ್ನು ವಿರೋಧಿಸಿದ ವಿರೋಧ ಪಕ್ಷಗಳ ವಿರುದ್ಧ ಪಟ್ಟಣದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ಪಟ್ಟಣದ ಅನಂತ ರಾಮ್ ವೃತ್ತದ ಬಳಿ ಜಮಾವಣೆಗೊಂಡ ನೂರಾರು ಕಾರ್ಯಕರ್ತರು ತಾಲೂಕು ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿಯ ಮೂಲಕ ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತೆರಳಿ ಧರಣಿ ಕುಳಿತರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್, ಮಾಜಿ ಪ್ರಧಾನಿ ದೇವೇಗೌಡರು ಮತ್ತು ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರಿಗೆ ಶೇ.33 ರಷ್ಟು ಮಹಿಳಾ ಮೀಸಲಾತಿ ಜಾರಿಗೊಳಿಸಲು ಮುಂದಾಗಿದ್ದು, ಇದನ್ನು ವಿಫಲಗೊಳಿಸುವ ಕಾಂಗ್ರೆಸ್ ಪಕ್ಷ ಸಂವಿಧಾನ ವಿರೋಧಿ ನೀತಿ ಅನುಸರಿಸಿದೆ ಎಂದು ಕಿಡಿಕಾರಿದರು.
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಕಾಯ್ದೆಯನ್ನು ಸಂವಿಧಾನ ತಿದ್ದುಪಡಿ ಮಸೂದೆಯನ್ನಾಗಿ ಚರ್ಚೆಗೆ ತೆಗೆದುಕೊಂಡು, ಮತಪೆಟ್ಟಿಗೆಗೆ ಕಳುಹಿಸಲಾಗಿತ್ತು. ಆದರೆ ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಸಮಾಜವಾದಿ ಪಕ್ಷ ಸೇರಿದಂತೆ ಹಲವು ವಿರೋಧ ಪಕ್ಷಗಳು ಈ ಮಸೂದೆಗೆ ವಿರೋಧ ಸೂಚಿಸಿದ್ದರಿಂದ ಅದು ಅಂಗೀಕಾರಗೊಳ್ಳದೆ ವಿಫಲವಾಯಿತು ಎಂದರು.
ಈ ವಿರೋಧವನ್ನು ಮಹಿಳಾ ವಿರೋಧಿ ನಿರ್ಧಾರ ಎಂದು ಎನ್‌ಡಿಎ ಮತ್ತು ಬಿಜೆಪಿ ಸಂಬಂಧಿ ಸಂಘಟನೆಗಳು ದೇಶವ್ಯಾಪಿ ಪ್ರತಿಭಟನೆಗಳನ್ನು ನಡೆಸುತ್ತಿವೆ. ರಾಜ್ಯಾದ್ಯಂತ ಕಾಂಗ್ರೆಸ್ ಕಚೇರಿಗಳ ಎದುರು, ಮುಖ್ಯರಸ್ತೆಗಳಲ್ಲಿ ಮಹಿಳಾ ಘಟಕಗಳು ಮೆರವಣಿಗೆ, ಧರಣಿ ನಡೆಸಿ ಮಹಿಳಾ ಮೀಸಲಾತಿಗೆ ವಿರೋಧಿಸಿದ ವಿರೋಧ ಪಕ್ಷಗಳಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ನಮ್ಮ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮೀಸಲಾತಿ ಮಸೂದೆಯನ್ನು ತಿರಸ್ಕರಿಸಿದ ವಿರೋಧ ಪಕ್ಷಗಳ ನಡೆಯನ್ನು ಮಹಿಳಾ ವಿರೋಧಿ, ದ್ರೋಹಪೂರ್ಣ ಎಂದು ಟೀಕಿಸಿದ್ದಾರೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಹನುಮಂತು ಮಾತನಾಡಿ, ದೇಶದ ಅರ್ಧದಷ್ಟು ಜನಸಂಖ್ಯೆಯಾಗಿರುವ ಮಹಿಳೆಯರನ್ನು ಅವಮಾನಿಸುವ ನಡೆ ಎಂದು ಹೇಳಿ, ಈ ಮಸೂದೆಯನ್ನು ಮರುಚರ್ಚೆ ಮಾಡಿ ಜಾರಿಗೆ ತರುವಂತೆ ಆಗ್ರಹಿಸಿದರು.
ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಪದ್ಮಮ್ಮ ಮಾತನಾಡಿ, ಕೇಂದ್ರ ಸರ್ಕಾರ ಮಂಡಿಸಿದ ಮಹಿಳಾ ಮೀಸಲಾತಿ ಕಾಯ್ದೆವನ್ನು ವಿರೋಧಿಸಿದ ವಿರೋಧ ಪಕ್ಷಗಳ ನಡೆಗೆ ವಿರೋಧಿಸಿ, ರಾಜ್ಯಾದ್ಯಂತ ಬಿಜೆಪಿ ಮತ್ತು ಮಹಿಳಾ ಘಟಕಗಳು ಪ್ರತಿಭಟನೆ ನಡೆಸಲಾಗುತ್ತಿದ್ದು, ಲೋಕಸಭೆಯಲ್ಲಿ ಮಸೂದೆ ತಿರಸ್ಕೃತವಾದ ಹಿನ್ನೆಲೆಯಲ್ಲಿ, ಈ ಕ್ರಮವನ್ನು ಮಹಿಳಾ ವಿರೋಧಿ ನಿರ್ಧಾರ ಎಂದು ಟೀಕಿಸಿ, ಮಹಿಳೆಯರಿಗೆ ನ್ಯಾಯ ಸಿಗುವ ತನಕ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.
ನಂತರ ಮಸೂದೆಯನ್ನು ಮರುಚರ್ಚೆ ಮಾಡಿ ಜಾರಿಗೆ ತರುವಂತೆ ಆಗ್ರಹಿಸಿದ ಮನವಿ ಪತ್ರವನ್ನು ರಾಜ್ಯಪಾಲರಿಗೆ ರವಾನಿಸಲು ತಹಸೀಲ್ದಾರ್ ಡಾ.ಲೋಕೇಶ್ ಅವರಿಗೆ ನೀಡಲಾಯಿತು.
ಜೆಡಿಎಸ್ ಎಸ್ಸಿ-ಎಸ್ಟಿ ತಾಲೂಕು ಅಧ್ಯಕ್ಷ ಕಾಂತರಾಜು, ಪುರಸಭೆ ಮಾಜಿ ಸದಸ್ಯ ನಂದಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಮಧು ಗಂಗಾಧರ್, ಜೆಡಿಎಸ್ ಮುಖಂಡ ಮಧು, ಮುಖಂಡರಾದ ಸಿದ್ದರಾಜು, ಬಸವರಾಜು, ಸಿದ್ದಾಚಾರಿ, ನಾಗೇಗೌಡ, ಅನಿತಾ, ಉಮಾ, ಮಹಿಳೆಯರು ಸೇರಿದಂತೆ ನೂರಕ್ಕೂ ಹೆಚ್ಚು ಕಾರ್ಯಕರ್ತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net