ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಹಲಗೂರು ಹೋಬಳಿ ಮಟ್ಟದ ಸಾರ್ವಜನಿಕರ ಕುಂದುಕೊರತೆ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ಎಚ್.ಜಿ.ಶ್ರೀನಿವಾಸ್, ಡಾ.ಪಿ.ವೀರಭದ್ರಪ್ಪ, ನಂಜಮಣಿ, ಸಂದೀಪ್ ಇತರರಿದ್ದರು.
ಹಲಗೂರು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿರ್ದೇಶನದಂತೆ ಕಳೆದ ಒಂದು ವರ್ಷದಿಂದ ಪ್ರತಿ ಸೋಮವಾರ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರ ಕುಂದು ಕೊರತೆ ಸಭೆ ನಡೆಸಲಾಗುತ್ತಿದೆ. ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಿ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಜಿ.ಶ್ರೀನಿವಾಸ್ ಹೇಳಿದರು.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಮಳವಳ್ಳಿ ಮತ್ತು ನಿಟ್ಟೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸರ್ಕಾರಿ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಹಲಗೂರು ಹೋಬಳಿ ಮಟ್ಟದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ನ್ಯಾಯಾಲಯದ ಪ್ರಕರಣಗಳನ್ನು ಹೊರತುಪಡಿಸಿ ಸಣ್ಣಪುಟ್ಟ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಲು ಶ್ರಮಿಸಲಾಗುತ್ತಿದೆ. ಎಲ್ಲ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
14 ವರ್ಷ ತುಂಬಿದ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ಉಚಿತವಾಗಿ ಎಚ್.ಪಿ.ವಿ ಲಸಿಕೆ ನೀಡಲಾಗುತ್ತಿದೆ. ಸಾರ್ವಜನಿಕರು ತಪ್ಪು ಕಲ್ಪನೆ ಬಿಟ್ಟು, ಲಸಿಕೆ ಅಭಿಯಾನಕ್ಕೆ ಸಹಕರಿಸಬೇಕು ಎಂದರು.
ಆರೋಗ್ಯ ಅಧಿಕಾರಿ ಡಾ.ಪಿ.ವೀರಭದ್ರಪ್ಪ ಮಾತನಾಡಿ, ಜೂನ್ 28 ರಿಂದ ಜುಲೈ 1ರವರೆಗೆ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಯಾರೂ ಲಸಿಕೆಯಿಂದ ವಂಚಿತರಾಗಬಾರದು ಎಂದು ಹೇಳಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂದೀಪ್ ಮಾತನಾಡಿ, ಕೃಷಿ ಇಲಾಖೆ ವತಿಯಿಂದ ಎಫ್.ಐ.ಡಿ ಮಾಡಿಸಿಕೊಂಡಿದ್ದರೆ ಮಾತ್ರ ಸರ್ಕಾರದ ಸೌಲಭ್ಯಗಳು ದೊರಕಲಿದೆ. ಈಗಾಗಲೇ ಎಫ್.ಐ.ಡಿ ಹೊಂದಿರುವ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ತಮ್ಮ ಒಟಿಪಿ ಹೇಳಿ ಸೆಂಟ್ರಲ್ ಐಡಿಯಲ್ಲಿ ಲಿಂಕ್ ಮಾಡಿಸಿಕೊಳ್ಳಿ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಸಖಿ ಕಾರ್ಯನಿರ್ವಹಿಸುತ್ತಿದ್ದು ರೈತರು ಕೃಷಿ ಸಖಿಯ ಸಹಾಯ ಪಡೆಯಬಹುದು ಎಂದರು.
ಶಿಶು ಅಭಿವೃದ್ಧಿ ಅಧಿಕಾರಿ ನಂಜಮಣಿ ಮಾತನಾಡಿ, ಗೃಹಲಕ್ಷ್ಮೀ ಯೋಜನೆ ವಿಸ್ತರಿಸಲು ನವೀಕರಣ ಮಾಡಬೇಕೆಂದು ಅಪ ಪ್ರಚಾರ ಮಾಡಲಾಗುತ್ತಿದೆ. ಈ ಸಂಬಂಧ ಸರ್ಕಾರದಿಂದ ಯಾವುದೇ ನಿರ್ದೇಶನಗಳು ಈವರೆಗೂ ಬಂದಿಲ್ಲ. ಸರ್ಕಾರದಿಂದ ಅಧಿಕೃತವಾಗಿ ನಿರ್ದೇಶನಗಳು ಬಂದರೆ ಸಾರ್ವಜನಿಕರಿಗೆ ತಿಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಾವೇರಿ ನೀರಾವರಿ ನಿಗಮದ ಎಇಇ ಗೋಪಿನಾಥ್, ಎಇಇ ರಂಗಸ್ವಾಮಿ, ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಸಂದೀಪ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಹದೇವು, ಸಾಜು ಫ್ರಾನ್ಸಿಸ್, ಪದ್ಮಾ, ಪಿಡಿಒ ನಟೇಶ್ ಭಾಗವಹಿಸಿದ್ದರು.
ಕುಡಿಯುವ ನೀರಿನ ಕೊರತೆ
ನಿಟ್ಟೂರು ಗ್ರಾಮದಲ್ಲಿ ಎರಡು ಕೊಳವೆ ಬಾವಿ ಇವೆ. ಒಂದು ಕೆಟ್ಟಿದ್ದು ಮತ್ತೊಂದರಲ್ಲಿ ನೀರು ಪೂರೈಸಲಾಗುತ್ತಿದೆ. ಇದರಿಂದಾಗಿ ಕುಡಿಯುವ ನೀರಿನ ಕೊರತೆ ಎದುರಾಗಿದೆ. ದೈನಂದಿನ ಚಟುವಟಿಕೆ ಸೇರಿದಂತೆ ಹಸುಗಳಿಗೆ ನೀರು ಕುಡಿಸಲು ತೊಂದರೆಯಾಗಿದೆ. ನಾವೇ ಹಲವು ಬಾರಿ ಅಧಿಕಾರಿಗಳಿಗೆ ಕರೆ ಮಾಡಿದರೂ ಕರೆಗೆ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು.
ಬೇಸಿಗೆ ಸಮಯದಲ್ಲೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಅಕ್ರಮ ಸಂಪರ್ಕಗಳನ್ನು ಪತ್ತೆ ಹಚ್ಚಿ ಕಡಿತಗೊಳಿಸಬೇಕು. ಕುಡಿಯುವ ನೀರಿನ ಇಂಜಿನಿಯರ್ ನೇತೃತ್ವದಲ್ಲಿ ಈಗಾಗಲೇ ಇರುವ ಕೊಳವೆ ಬಾವಿಗಳಲ್ಲಿನ ನೀರು ಪರೀಕ್ಷಿಸಿ, ನೀರಿನ ಗಾತ್ರ ಸರಿ ಇಲ್ಲದಿದ್ದಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಗ್ರಾಮ ಪಂಚಾಯಿತಿ ಗುತ್ತಿಗೆಗೆ ಪಡೆದು ಕುಡಿಯುವ ನೀರು ಪೂರೈಸಲು ಕ್ರಮ ವಹಿಸಬೇಕು ಎಂದು ಇಒ ಎಚ್.ಜಿ.ಶ್ರೀನಿವಾಸ್ ಸೂಚನೆ ನೀಡಿದರು.