ಸಹಕಾರ ಸಂಘಗಳು ಬೆಳೆಗಳಿಗೆ ಮಾರುಕಟ್ಟೆ ಸೃಷ್ಟಿಸಲಿ

ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಸಹಕಾರ ಸಂಘಗಳ ಸಿಇಒಗಳಿಗಾಗಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ  ಮಾತನಾಡಿದರು. ರಣಜಿತ್, ನಾಗಭೂಷಣ್ ಇತರರು ಇದ್ದರು.
ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಸಹಕಾರ ಸಂಘಗಳ ಸಿಇಒಗಳಿಗಾಗಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿದರು. ರಣಜಿತ್, ನಾಗಭೂಷಣ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ದರ್ಶನ್ ಪುಟ್ಟಣ್ಣಯ್ಯ ಆಶಯ
  • ಸಿಇಒಗಳಿಗೆ ತರಬೇತಿ ಕಾರ್ಯಾಗಾರ
ಪಾಂಡವಪುರ: ಸಹಕಾರ ಸಂಘಗಳ ಮೂಲಕ ಗ್ರಾಮೀಣ ಜನರು ಸ್ವಾವಲಂಬನೆ ಹಾಗೂ ಆರ್ಥಿಕ ಸ್ವಾತಂತ್ರ್ಯ ಪಡೆಯಬೇಕಿದ್ದು, ಈ ನಿಟ್ಟಿನಲ್ಲಿ ಸಹಕಾರ ಸಂಘಗಳು ಪರಿವರ್ತನೆಯಾಗಬೇಕಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಬುಧವಾರ ರೈತ ನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಫೌಂಡೇಶನ್ ಆಯೋಜಿಸಿದ್ದ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಸ್ಥಳೀಯ ಆರ್ಥಿಕಾಭಿವೃದ್ಧಿ ಸಂಬಧಿಸಿದಂತೆ ಸಂಘದ ಸಿಇಒಗಳಿಗೆ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಧಿಕಾರ ವಿಕೇಂದ್ರೀಕರಣ ಉದ್ದೇಶದಿಂದ ಗ್ರಾಮ ಪಂಚಾಯಿತಿಗಳನ್ನು ರಚಿಸಲಾಯಿತು. ಅಧಿಕಾರ ವಿಕೇಂದ್ರಿಕರಣವಾಗುವ ಜತೆಗೆ ಅರ್ಥಿಕತೆ ವಿಕೇಂದ್ರಿಕರಣಗೊಳ್ಳಬೇಕಿದೆ. ಬಹಳ ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘಗಳು ಕೇವಲ ರಸಗೊಬ್ಬರ, ಕ್ರಿಮಿನಾಶಕ, ಆಹಾರ ವಿತರಣೆ ಮಾಡಿದರಷ್ಟೇ ಸಾಲದು. ಸ್ಥಳೀಯವಾಗಿ ರೈತರ ಬೆಳೆಗಳನ್ನು ಖರೀದಿಸಿ ಮಾರುಕಟ್ಟೆ ಸೃಷ್ಟಿ ಮಾಡಬೇಕು. ಸ್ಥಳೀಯ ಜನರಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಬೇಕು. ಕೋಲ್ಡ್ ಸ್ಟೋರೇಜ್ ಮೂಲಕ ರೈತರ ಬೆಳೆಗಳನ್ನು ಸಂರಕ್ಷಿಸಿಡಬೇಕು. ಅಗತ್ಯಕ್ಕಿಂತ ಹೆಚ್ಚು ಉತ್ಪನ್ನಗಳನ್ನು ಬೇರೆಡೆಗೆ ಸರಬರಾಜು ಮಾಡಬೇಕು. ಸಹಕಾರ ಸಂಘಗಳು ಸುಮಾರು 241 ಸೇವೆಗಳನ್ನು ಕೈಗೊಳ್ಳಲು ಅವಕಾಶವಿದೆ ಎಂದರು.
ರಾಜ್ಯದಲ್ಲಿರುವ ಸಹಕಾರ ಸಂಘಗಳ ಪೈಕಿ ಶೇ.87ರಷ್ಟು ಭ್ರಷ್ಟಾಚಾರದಲ್ಲಿವೆ ಎಂಬ ಮಾಹಿತಿ ಇದೆ. ರೈತರು ತಮ್ಮ ಉತ್ಪನ್ನಗಳ ಪೈಕಿ ಶೇ.27ರಷ್ಟು ಮಾತ್ರ ಲಾಭ ಪಡೆಯುತ್ತಿದ್ದರೆ, ಶೇ.73ರಷ್ಟು ರೈತರ ಉತ್ಪನ್ನಗಳ ಲಾಭವು ದಲ್ಲಾಳಿಗಳ ಪಾಲಾಗುತ್ತಿವೆ. ಹಾಗಾಗಿ ರಾಜಕಾರಣವನ್ನು ಬದಿಗೊತ್ತಿ ಪಕ್ಷಾತೀತವಾಗಿ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಲವರ್ಧನೆಗೊಳಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಸಹಕಾರ ಸಂಘದ ಸಿಇಒಗಳು ಮತ್ತು ನಿರ್ದೇಶಕರು ಕಾರ್ಯಪ್ರವೃತ್ತರಾಗಬೇಕು ಎಂದರು.
ಪುಟ್ಟಣ್ಣಯ್ಯ ಫೌಂಡೇಶನ್‌ನಿಂದ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಸೌದೇನಹಳ್ಳಿ ಗ್ರಾಮವನ್ನು ಆರ್ಥಿಕ ಸರ್ವೇ ಮಾಡಲಾಯಿತು. ಗ್ರಾಮದಲ್ಲಿ ವರ್ಷಕ್ಕೆ 3.4 ಕೋಟಿ ರೂ. ಆದಾಯವಿದೆ. ಆದರೆ 4.7 ಕೋಟಿ ರೂ. ಖರ್ಚು ಇದೆ. ಚಿಕ್ಕ ಗ್ರಾಮವು ಶೇ.75ರಷ್ಟು ಸಾಲದಲ್ಲಿದೆ. ಇಂತಹ ಹಲವು ಗ್ರಾಮಗಳಿವೆ. ಹೀಗಾಗಿ ಸ್ಥಳೀಯ ಆರ್ಥಿಕಾಭಿವೃದ್ಧಿ ಬಗ್ಗೆ ನಾವು ಹೆಚ್ಚು ಗಮನಹರಿಸಬೇಕಿದೆ ಎಂದರು.
ಈ ವೇಳೆ ನಬಾರ್ಡ್ ಎಜಿಎಂ ಹರ್ಷಿತಾ, ಸಹಕಾರ ಸಂಘಗಳ ಜಿಲ್ಲಾ ರಿಜಿಸ್ಟರ್ ಶೀಲಾ, ತಾಲೂಕು ರಿಜಿಸ್ಟರ್ ಎಚ್.ಆರ್.ನಾಗಭೂಷಣ್, ಪುಟ್ಟಣ್ಣಯ್ಯ ಫೌಂಡೇಷನ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಣಜಿತ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net