ನಗರಸಭೆ ಸಮಗ್ರ ಅಭಿವೃದ್ಧಿಗೆ ಪಣ

ಮದ್ದೂರು ನಗರದ ಒಳಚರಂಡಿ ದುರಸ್ತಿ, ತ್ಯಾಜ್ಯನೀರು ಸಂಸ್ಕರಣಾ ಘಟಕ ಕಾಮಗಾರಿಗೆ ಶಾಸಕ ಕೆ.ಎಂ.ಉದಯ ಚಾಲನೆ ನೀಡಿದರು. ಕೋಕಿಲಾ ಅರುಣ್, ಟಿ.ಆರ್.ಪ್ರಸನ್ನಕುಮಾರ್, ಎಂ.ಬಿ.ಸಚಿನ್, ಸಿದ್ದರಾಜು, ಕಮಲ್‌ನಾಥ್, ಎಂ.ಡಿ.ಮಹಾಲಿಂಗಯ್ಯ ಇದ್ದರು.
ಮದ್ದೂರು ನಗರದ ಒಳಚರಂಡಿ ದುರಸ್ತಿ, ತ್ಯಾಜ್ಯನೀರು ಸಂಸ್ಕರಣಾ ಘಟಕ ಕಾಮಗಾರಿಗೆ ಶಾಸಕ ಕೆ.ಎಂ.ಉದಯ ಚಾಲನೆ ನೀಡಿದರು. ಕೋಕಿಲಾ ಅರುಣ್, ಟಿ.ಆರ್.ಪ್ರಸನ್ನಕುಮಾರ್, ಎಂ.ಬಿ.ಸಚಿನ್, ಸಿದ್ದರಾಜು, ಕಮಲ್‌ನಾಥ್, ಎಂ.ಡಿ.ಮಹಾಲಿಂಗಯ್ಯ ಇದ್ದರು.
Published on
ಮದ್ದೂರು: ಮದ್ದೂರು ನಗರಸಭೆಯನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ಜತಗೆ ಶಾಶ್ವತ ಯೋಜನೆಗಳನ್ನು ರೂಪಿಸಿ ಕಸಮುಕ್ತ ಹಾಗೂ ಗುಂಡಿಮುಕ್ತ ನಗರವನ್ನಾಗಿಸಲು ಪಣ ತೊಟ್ಟಿರುವುದಾಗಿ ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಪಟ್ಟಣದ ವಿಶ್ವೇಶ್ವರಯ್ಯ ನಗರದಲ್ಲಿ ಕರ್ನಾಟಕ ನಗರನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ನಗರಸಭೆ ವತಿಯಿಂದ ಆಯೋಜಿಸಿದ್ದ ಪಟ್ಟಣದ ಒಳಚರಂಡಿ ದುರಸ್ತಿ, ಕೊಲ್ಲಿ ವೃತ್ತದಲ್ಲಿರುವ ತೇವಬಾವಿ ಅಭಿವೃದ್ಧಿ ಮತ್ತು ತ್ಯಾಜ್ಯನೀರು ಸಂಸ್ಕರಣಾ ಘಟಕ, ತೃತೀಯ ಹಂತದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಒಟ್ಟು 16.49 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಹಲವು ವರ್ಷಗಳಿಂದಲೂ ಪುರಸಭೆ ವ್ಯಾಪ್ತಿಯಲ್ಲಿ ಒಂದಲ್ಲ ಒಂದು ಸಮಸ್ಯೆಗಳಿದ್ದು ಈ ವ್ಯಾಪ್ತಿಯ ಜನರು ಸಂಕಷ್ಟದ ನಡುವೆ ದಿನ ದೂಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಯಂತೆ ಯುಜಿಡಿ ಸಂಪರ್ಕ, ರಸ್ತೆ ಅಭಿವೃದ್ಧಿ ಇನ್ನಿತರ ಕಾಮಗಾರಿಗಳನ್ನು ಕೈಗೊಂಡು ಈ ಭಾಗದ ಬಹುದಿನದ ಬೇಡಿಕೆಯನ್ನು ಈಡೇರಿಸಿದ್ದೇನೆ ಎಂದು ತಿಳಿಸಿದರು.
ಪಟ್ಟಣ ವ್ಯಾಪ್ತಿಯ ಸ್ಥಳೀಯ ನಿವಾಸಿಗಳು ಯುಜಿಡಿ ಸಂಪರ್ಕದ ತ್ಯಾಜ್ಯನೀರು ಮತ್ತು ಇನ್ನಿತರ ಪದಾರ್ಥಗಳನ್ನು ನಾಲೆಗಳಿಗೆ ಹರಿಬಿಡುತ್ತಿದ್ದಾರೆ. ಪರಿಣಾಮ ನಾಲೆ ನೀರು ಕಲುಷಿತಗೊಂಡು ತ್ಯಾಜ್ಯದಿಂದ ಹೂಳು ತುಂಬಿಕೊಂಡಿದೆ. ಇದರಿಂದ ಕೊನೆಯ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ. ಈ ಸಂಬಂಧ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರತ್ಯೇಕವಾಗಿ ಒಳಚರಂಡಿ ಕಾಮಗಾರಿ ಕೈಗೊಂಡು ನಾಲೆ ಆಧುನೀಕರಣಕ್ಕೂ ಮುಂದಾಗಿದ್ದು ಸಂಸ್ಕರಣ ಘಟಕವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ 100 ಕೋಟಿ ರೂ.ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಗರಸಭೆ ವಿಸ್ತಾರಗೊಂಡು ಜನಸಂಖ್ಯೆಗನುಗುಣವಾಗಿ ಒಳಚರಂಡಿ ಮತ್ತು ಇನ್ನಿತರ ಕಾಮಗಾರಿಗಳನ್ನು ಕೈಗೊಂಡು ಸ್ವಚ್ಛ, ಸುಂದರ ನಗರವನ್ನಾಗಿಸಲು ಪಣತೊಟ್ಟಿದ್ದೇನೆ ಎಂದರು.
ಭೈರನ್ ನಾಲೆ ಮತ್ತು ವೈದ್ಯನಾಥಪುರ ನಾಲೆಗಳ ಆಧುನೀಕರಣಕ್ಕೆ 50 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ವಾರದೊಳಗೆ ಕಾಮಗಾರಿಗೆ ಚಾಲನೆ ನೀಡಲಿದ್ದೇನೆ. ಕೆಮ್ಮಣ್ಣು ನಾಲೆ ಆಧುನೀಕರಣ ಕಾಮಗಾರಿ ಮುಂದಿನ ಒಂದು ತಿಂಗಳೊಳಗಾಗಿ ಪೂರ್ಣಗೊಳ್ಳಲಿದ್ದು ಮುಂದಿನ ಬೇಸಿಗೆ ಹಂಗಾಮಿಗೆ ಹಂತ ಹಂತವಾಗಿ ನೀರು ಹರಿಸಲು ಕ್ರಮ ವಹಿಸಲಾಗಿದೆ. ಮುಂದಿನ ಎರಡು ತಿಂಗಳೊಳಗೆ ಪೇಟೆಬೀದಿ ವಿಸ್ತರಣೆ ಕಾಮಗಾರಿ ಕೈಗೊಳ್ಳಲಿದ್ದು ಈಗಾಗಲೇ ಸಾರ್ವಜನಿಕರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಗೆಜ್ಜಲಗೆರೆ ಗ್ರಾಪಂ ಅನ್ನು ನಗರಸಭೆಯಿಂದ ಕೈಬಿಡುವಂತೆ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಕೆ.ಎಂ.ಉದಯ್, ಕ್ಷೇತ್ರದ ಜನತೆ ಅಭಿವೃದ್ಧಿ ದೃಷ್ಟಿಯಿಂದ ನನ್ನನ್ನು ಭಾರಿ ನಿರೀಕ್ಷೆಯೊಂದಿಗೆ ಮೊದಲ ಬಾರಿಗೆ ಶಾಸಕರನ್ನಾಗಿ ಆಯ್ಕೆ ಮಾಡಿದ್ದು ರೈತರು, ಬಡವರು, ಶ್ರಮಿಕರಿಗೆ ಸಹಾಯ ಮಾಡುವ ಜತೆಗೆ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ. ಪ್ರತಿಭಟನೆ, ಮುಷ್ಕರ ಕೈಗೊಂಡಿರುವವರಿಗೆ ಉತ್ತರ ನೀಡುವಷ್ಟು ಸಮಯ ನನಗಿಲ್ಲ. ಹೀಗಾಗಿ ಅಭಿವೃದ್ಧಿ ವಿಚಾರದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಸಮಯವಿಲ್ಲ ಎಂದರು.
ನಗರಸಭೆ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್, ಮಾಜಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಮಾಜಿ ಸದಸ್ಯರಾದ ಎಂ.ಬಿ.ಸಚಿನ್, ಸಿದ್ದರಾಜು, ಕಮಲ್‌ನಾಥ್, ಬಸವರಾಜು, ಮಸೀಫ್, ಶಾಂತಮ್ಮ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಡಿ.ಮಹಾಲಿಂಗಯ್ಯ, ಮುಖಂಡರಾದ ಕುಶಾಲ್‌ಗೌಡ, ಮಹದೇವು, ರವೀಂದ್ರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net