ಕನ್ನಡ ಭಾಷೆಯನ್ನು ಕ್ರಿಯಾತ್ಮಕವಾಗಿ ಬಳಸಿ ನಿತ್ಯೋತ್ಸವವಾಗಿಸಿ

ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಎನ್.ಎಸ್‌ರಾಮೇಗೌಡ ಮತ್ತು ಜಿಲ್ಲೆಯ ಹಿರಿಯ ಪತ್ರಕರ್ತ ಎಂ.ಸಿದ್ದರಾಜು ಅವರನ್ನು ಡಾ.ನಿರ್ಮಲಾನಂದನಾಥಶ್ರೀ ಸನ್ಮಾನಿಸಿದರು.
ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಎನ್.ಎಸ್‌ರಾಮೇಗೌಡ ಮತ್ತು ಜಿಲ್ಲೆಯ ಹಿರಿಯ ಪತ್ರಕರ್ತ ಎಂ.ಸಿದ್ದರಾಜು ಅವರನ್ನು ಡಾ.ನಿರ್ಮಲಾನಂದನಾಥಶ್ರೀ ಸನ್ಮಾನಿಸಿದರು.
Published on
ನಾಗಮಂಗಲ: ದೇಶದೊಳಗೆ ಮತ್ತು ಹೊರಗೆ ಕನ್ನಡದ ಸ್ಮರಣೆ ಆಚರಣೆಯು ಭಾಷೆಯ ಅಸ್ಮಿತೆಗೆ ಸಾಕ್ಷಿಯಾಗಿದೆ, ಭಾವನಾತ್ಮಕ ಸ್ಪರ್ಶವಿರುವ ಕನ್ನಡ ಭಾಷೆಯನ್ನು ವರ್ಷಪೂರ್ತಿ ಕ್ರಿಯಾತ್ಮಕವಾಗಿ ಬಳಸಿ ನಿತ್ಯೋತ್ಸವವಾಗಿಸಬೇಕು ಎಂದು ಚಲನಚಿತ್ರ ನಿರ್ದೇಶಕ ಹಾಗೂ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಸಲಹೆ ನೀಡಿದರು. 
ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ವತಿಯಿಂದ ಬಿಜಿಎಸ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಅನುಕೂಲಕ್ಕೆ ಯಾವ ಭಾಷೆಗಳನ್ನಾದರೂ ಕಲಿಯಿರಿ, ಆದರೆ ಅನವಶ್ಯಕವಾಗಿ ಇಂಗ್ಲಿಷ್ ಬಳಕೆ ಬೇಡ. ಮಾತೃಭಾಷೆಗೆ ಹೆಚ್ಚು ಆದ್ಯತೆ ಕೊಟ್ಟು ಕನ್ನಡವನ್ನು ಬಳಸಿ ಬೆಳೆಸಿದರೆ ಕನ್ನಡದ ಪರಂಪರೆಯನ್ನು ಅರಿತ ಕಲೆ ಸಾಹಿತ್ಯ ಶಿಕ್ಷಣದ ಒಡನಾಟದಿಂದ ಸಂಬಂಧಗಳ ವಿಶ್ವರೂಪವೇ ಅನಾವರಣವಾಗುತ್ತದೆ ಎಂದರು.
ಅಂತರ್ಜಾಲ ತಾಣದ ಬಳಕೆಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಆದರೆ ನಮ್ಮ ಹಿರಿಯರು ಭಾಷೆಯ ಅದ್ಭುತ ಲೋಕವನ್ನೇ ಕಟ್ಟಿಕೊಟ್ಟಿದ್ದಾರೆ. ನಿತ್ಯ ಬಳಸಿದರೆ ಸಾಕು ಕನ್ನಡದ ಸೊಬಗು ಇಮ್ಮಡಿಸುತ್ತದೆ. ಪಂಪನಿಂದ ಆರಂಭವಾಗಿ ಶಿವಶರಣರು ಹರಿದಾಸರಿಂದ ಮುಂದುವರಿದ ಕನ್ನಡವು ವಿಶಿಷ್ಟ ಧಾರಣ ಶಕ್ತಿಯನ್ನು ಪಡೆದಿದೆ ಎಂದು ಹೇಳಿದರು.
ಎಂಟು ಜ್ಞಾನಪೀಠ ಪ್ರಶಸ್ತಿಗಳು ಪ್ರಬುದ್ಧ ಕನ್ನಡಾಂಬೆಯ ಮುಡಿಗೇರಿವೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯು ಕನ್ನಡದ ಕೀರ್ತಿಯನ್ನು ವಿಸ್ತರಿಸಿದೆ. ಕನ್ನಡ ಪುಸ್ತಕಗಳು ನಿರಂತರ ಹಣತೆಯಾಗಿ ನಿಲ್ಲುತ್ತವೆ. ಕನ್ನಡ ದಿನಪತ್ರಿಕೆಯನ್ನು ಓದಿ ಕನ್ನಡ ನಾಟಕ ಸಿನಿಮಾ ನೋಡುತ್ತಾ ನವೆಂಬರ್ ಒನ್ ಕನ್ನಡಿಗರಾಗದೆ ನಂಬರ್ ಒನ್ ಕನ್ನಡಿಗರಾಗೋಣ ಎಂದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥಶ್ರೀ ಆಶೀರ್ವಚನ ನೀಡಿ, ಎರಡು ಸಾವಿರ ವರ್ಷಗಳ ಇತಿಹಾಸವಿರುವ ಸಂಪತ್ಭರಿತ ಭಾಷೆ ನಮ್ಮದು. ಇಂಥ ಶ್ರೇಷ್ಠ ಕನ್ನಡದ ಕಂಪು ಘನತೆಯನ್ನು ವಿಶ್ವದೆಲ್ಲೆಡೆ ಪಸರಿಸಿದ ನಾಗತಿಹಳ್ಳಿ ಚಂದ್ರಶೇಖರ ನಮ್ಮೊಂದಿಗೆ ಇದ್ದಾರೆ ಎಂದರು.
ಒಂದು ಗಿಡವನ್ನು ನೆಟ್ಟು ನೀರೆರೆದು ಪೋಷಿಸಿದರೆ ಸುಂದರ ಹೂವು ದೊರೆಯುವಂತೆ ಕನ್ನಡ ಭಾಷೆಯನ್ನು ಬಳಸಿದರೆ ಸಾಕು ಪಲ್ಲವಿಸಿ ಸೌರಭವನ್ನು ಸೂಸುತ್ತದೆ. ಕುವೆಂಪು ಅವರು ಆಂಗ್ಲಭಾಷೆಯಲ್ಲಿ ಬರೆದ ಕವನ ಸಂಕಲನವನ್ನು ಐರಿಷ್ ಕವಿ ವಿಲಿಯಂ ಜೇಮ್ಸ್ ಕಸಿನ್‌ರಿಗೆ ತೋರಿಸಿದಾಗ ಅವರು ಕೊಟ್ಟ ಸಲಹೆಯಂತೆ ಕನ್ನಡದಲ್ಲಿ ಕೃಷಿ ಮಾಡಿದ ಕುವೆಂಪು ಮಹಾಕಾವ್ಯವನ್ನು ರಚಿಸಿ ಶ್ರೇಷ್ಠ ಕವಿಯಾಗಿ ಕನ್ನಡವನ್ನು ಸಮೃದ್ಧ ಭಾಷೆಯಾಗಿಸಿದರು. ಒಬ್ಬ ಶ್ರೇಷ್ಠ ವ್ಯಕ್ತಿ ಆ ಭಾಷೆಯ ಸತ್ವ ಭಾವನೆಯನ್ನು ಉತ್ಕೃಷ್ಟ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಮುಖ್ಯ ಆಡಳಿತಾಧಿಕಾರಿ ಡಾ. ಎನ್.ಎಸ್.ರಾಮೇಗೌಡ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ಜಿಲ್ಲೆಯ ಹಿರಿಯ ಪತ್ರಕರ್ತ ಎಂ.ಸಿದ್ದರಾಜು ಅವರನ್ನು ಡಾ.ನಿರ್ಮಲಾನಂದನಾಥಶ್ರೀಗಳು ಸನ್ಮಾನಿಸಿದರು.
ಕಾರ್ಯಕ್ರಮಕ್ಕೂ ಮೊದಲು ನಾಡಿನ ಖ್ಯಾತ ಸಾಹಿತಿ ಪ್ರೊ.ಎಸ್.ಎಲ್.ಭೈರಪ್ಪ ಹಾಗೂ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಸಾಹಸಗಾಥೆಯ ಕಿರುಚಿತ್ರಗಳಿಗೆ ಸಭಾಂಗಣದಲ್ಲಿ ಚಪ್ಪಾಳೆಯ ಹರ್ಷ ಘೋಷ ಮೊಳಗಿತು. ಇದೇ ವೇಳೆ ವಿಶ್ವವಿದ್ಯಾಲಯದ ಉಪಕುಲಪತಿ, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ರಚಿಸಿದ 5 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಆದಿಚುಂಚನಗಿರಿ ಮಠದ ಧರ್ಮದರ್ಶಿ ಡಿ.ದೇವರಾಜು ಮಾತನಾಡಿದರು. ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಜಾನಪದ ಕಲಾ ಪ್ರಕಾರಗಳೊಂದಿಗೆ ಮೆರವಣಿಗೆ ಹಾಗೂ ವೇದಿಕೆಯಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ಎನ್.ಶ್ರೀಧರ,  ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ, ವಿಶ್ವವಿದ್ಯಾಲಯ ಡೀನ್‌ಗಳಾದ ಡಾ. ಎಂ.ಜಿ.ಶಿವರಾಮ್, ಡಾ.ಬಿ.ರಮೇಶ್, ಡಾ.ಎ.ಟಿ.ಶಿವರಾಮು, ಶ್ರೀಮಠದ ಸತ್ಕೀರ್ತಿನಾಥ ಸ್ವಾಮೀಜಿ, ಶೈಲನಾಥಸ್ವಾಮೀಜಿ, ಪ್ರಾಂಶುಪಾಲರು, ಅಧಿಕಾರಿ ವರ್ಗದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net