ನಾಗಮಂಗಲ ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಮೂಡ್ಲೀಗೌಡ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ನಾಗಮಂಗಲ: ಗ್ಯಾರಂಟಿ ಯೋಜನೆಗಳು ದುರ್ಬಳಕೆಯಾಗಬಾರದು ಎಂಬ ಉದ್ದೇಶದಿಂದ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ ಹೊರತು ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ ತಿಳಿಸಿದರು.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ. ಜನರ ದಿಕ್ಕು ತಪ್ಪಿಸುವ ಸಲುವಾಗಿ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುತ್ತವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವದಂತಿ ಹಬ್ಬಿಸಲಾಗುತ್ತಿದೆ. ಜನರು ಇದಕ್ಕೆ ಕಿವಿಗೊಡಬಾರದು ಎಂದು ಹೇಳಿದರು.
ಆಹಾರ ಇಲಾಖೆ ನಿರೀಕ್ಷಕ ಅನಿಲ್‌ಕುಮಾರ್ ಸಭೆಗೆ ಮಾಹಿತಿ ನೀಡಿ, ತಾಲೂಕಿನಲ್ಲಿ 4,425 ಅಂತ್ಯೋದಯ, 43,688 ಬಿಪಿಎಲ್ ಕಾರ್ಡ್‌ಗಳಿವೆ. 1,120 ಬಿಪಿಎಲ್ ಕಾರ್ಡ್‌ಗಳ ಪೈಕಿ ಶೇ.60 ಮೃತಪಟ್ಟಿರುವ ಕುಟುಂಬದ ಮುಖ್ಯಸ್ಥರ ಹೆಸರುಗಳನ್ನು ಪರಿಷ್ಕರಣೆ ಮಾಡಲಾಗಿದೆ. ಅಂತಹ ಫಲಾನುಭವಿಗಳಿಗೆ 45ದಿನಗಳ ನಂತರ ಆಹಾರ ಪದಾರ್ಥ ಬಿಡುಗಡೆಯಾಗಲಿದೆ. ಇನ್ನುಳಿದಂತೆ ಅರ್ಹ ಫಲಾನುಭವಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಪಡಿತರ ಪದಾರ್ಥಗಳನ್ನು ಪೂರೈಸಲಾಗುತ್ತಿದೆ ಎಂದರು.
ಕುಟುಂಬದಲ್ಲಿ ವಿವಾಹಿತ ಮಕ್ಕಳು ತಂದೆ ತಾಯಿ ಜೊತೆ ವಾಸವಿದ್ದರೂ ಸಹ ಪ್ರತ್ಯೇಕ ಬಿಪಿಎಲ್ ಕಾರ್ಡ್ ಪಡೆದಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅದನ್ನು ಪತ್ತೆ ಹಚ್ಚಿ ಮುಂದಿನ ಸಭೆಗೆ ವರದಿ ನೀಡಬೇಕು ಎಂದು ಅಧ್ಯಕ್ಷ ಮೂಡ್ಲೀಗೌಡ ಸೂಚಿಸಿದರು.
ನಾಗಮಂಗಲ ಘಟಕದ 70 ಸಾರಿಗೆ ಬಸ್‌ಗಳಲ್ಲಿ ಪ್ರತಿನಿತ್ಯ ಸುಮಾರು 23ಸಾವಿರಕ್ಕೂ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಕಳೆದ ಮೇ ತಿಂಗಳಲ್ಲಿ 6,92,626 ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಇದರಿಂದಾಗಿ ಸಂಸ್ಥೆಗೆ 2,65,96,754 ರೂ.ಹಣ ಸರ್ಕಾರದಿಂದ ಪಾವತಿಯಾಗಿದೆ ಎಂದು ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಮಹೇಶ್ ಸಭೆಗೆ ಮಾಹಿತಿ ನೀಡಿದರು.
ಗೃಹಲಕ್ಷ್ಮಿ ಯೋಜನೆ ಪ್ರಗತಿ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕ ಹರಿಪ್ರಸಾದ್, ಯುವ ನಿಧಿ ಯೋಜನೆ ಕುರಿತು ಉದ್ಯೋಗ ವಿನಿಮಯ ಕಚೇರಿಯ ಲತಾ, ಗೃಹಜ್ಯೋತಿ ಯೋಜನೆ ಕುರಿತು ಸೆಸ್ಕ್ ನೌಕರ ಸಭೆಗೆ ಮಾಹಿತಿ ನೀಡಿದರು.
ತಾ.ಪಂ.ಯೋಜನಾಧಿಕಾರಿ ಸಂದೀಪ್, ಸಮಿತಿಯ ಸದಸ್ಯರಾದ ನೀಲಾಮೂರ್ತಿ, ಗೀತಾ, ಶ್ರೀಧರ್, ವಿನಯ್, ಶರತ್‌ಕುಮಾರ್, ಸಿ.ಧನರಾಜ್, ನವೀನ್, ರವಿಕಾಂತೇಗೌಡ, ತಾಪಂ ಅಧಿಕಾರಿ ರವಿ ಇದ್ದರು.