ಆರೋಗ್ಯವನ್ನೂ ಲೆಕ್ಕಿಸದೆ ಅಭಿವೃದ್ಧಿಗೆ ಶ್ರಮ

ನಾಗಮಂಗಲ ತಾಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಎನ್.ಚಲುವರಾಯಸ್ವಾಮಿ ಭೂಮಿಪೂಜೆ ನೆರವೇರಿಸಿದರು. ಜಿ.ಆದರ್ಶ, ಸತೀಶ್, ಹೇಮಂತ್‌ಕುಮಾರ್, ಬಿ.ಎಂ.ಪ್ರಕಾಶ್, ಎನ್.ಟಿ.ಕೃಷ್ಣಮೂರ್ತಿ, ಎಂ.ಹುಚ್ಚೇಗೌಡ ಇತರರಿದ್ದರು.
ನಾಗಮಂಗಲ ತಾಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಎನ್.ಚಲುವರಾಯಸ್ವಾಮಿ ಭೂಮಿಪೂಜೆ ನೆರವೇರಿಸಿದರು. ಜಿ.ಆದರ್ಶ, ಸತೀಶ್, ಹೇಮಂತ್‌ಕುಮಾರ್, ಬಿ.ಎಂ.ಪ್ರಕಾಶ್, ಎನ್.ಟಿ.ಕೃಷ್ಣಮೂರ್ತಿ, ಎಂ.ಹುಚ್ಚೇಗೌಡ ಇತರರಿದ್ದರು.
Published on
ನಾಗಮಂಗಲ: ಅಧಿಕಾರವಿರಲಿ, ಇಲ್ಲದಿರಲಿ. ನಾನು ಶಾಸಕನಾಗಿದ್ದ ಅವಧಿಯಲ್ಲೆಲ್ಲ ಇದೇ ವೇಗದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮೂರು ವರ್ಷದಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೇವಲಾಪುರ ಹೋಬಳಿಯಲ್ಲಿ ಅತಿಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ತಾಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ 6 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ದೇವಲಾಪುರ ಹೋಬಳಿಯ ಮೈಲಾರಪಟ್ಟಣ, ರಾಮೇನಹಳ್ಳಿ, ಹರದನಹಳ್ಳಿ, ಅರಕೆರೆ, ನಾಗನಹಳ್ಳಿ, ಅಂಚೀಪುರ, ತೊರೆಮಲ್ಲನಾಯ್ಕನಹಳ್ಳಿ, ದೊಡ್ಡಹುಪ್ಪಳ, ಕೋಟೆಬೆಟ್ಟ ಸೇರಿದಂತೆ ವಿವಿಧ ಗ್ರಾಮಗಳ ಸೇತುವೆ, ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ 150 ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿಸಲಾಗಿದೆ. ಭೀಮನಹಳ್ಳಿ ಗ್ರಾಮದಿಂದ ಮದ್ದೇನಹಟ್ಟಿ, ದೇವಲಾಪುರ ಅರೆತಿಮ್ಮಪ್ಪಸ್ವಾಮಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು 6ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಮದ್ದೇನಹಟ್ಟಿ ಸಮೀಪ 2.5ಕೋಟಿ ವೆಚ್ಚದಲ್ಲಿ ಸೇತುವೆ ಅಭಿವೃದ್ಧಿಪಡಿಸಲಾಗುವುದು. ಈ ಭಾಗದ ಹೇಮಾವತಿ ಮುಖ್ಯ ಕಾಲುವೆಗಳ ಆಧುನೀಕರಣಕ್ಕೆ 50 ಕೋಟಿ ರೂ. ಮಂಜೂರು ಮಾಡಿಸಲಾಗಿದೆ. ದೇವಲಾಪುರ ರಾಮೇನಹಳ್ಳಿ ನಡುವಿನ ಸೇತುವೆ ಅಭಿವೃದ್ಧಿ ಕಾಮಗಾರಿಗೆ 5 ಕೋಟಿ ರೂ. ಮಂಜೂರು ಮಾಡಿಸಲಾಗಿದೆ ಎಂದು ಹೇಳಿದರು.
ಈ ಹಿಂದೆ ಕ್ಷೇತ್ರದಲ್ಲಿ ಶಾಸಕರಾಗಿದ್ದ ಯಾರಾದರೂ ಒಂದು ಅವಧಿಯಲ್ಲಿ ಇಷ್ಟೊಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ ನಾನು ಈಗಲೇ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ದೇವಲಾಪುರ ಹೋಬಳಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವಂತೆ ವಿಧಾನಸಭಾ ಕ್ಷೇತ್ರದ ಎಲ್ಲ ಹೋಬಳಿಗಳಲ್ಲಿಯೂ ನಡೆಯುತ್ತಿವೆ. ಕ್ಷೇತ್ರದ ಜನರ ಋಣ ತೀರಿಸುವ ಸಲುವಾಗಿ ನನ್ನ ಆರೋಗ್ಯವನ್ನೂ ಲೆಕ್ಕಿಸದೆ ತಾಲೂಕು ಮತ್ತು ಜಿಲ್ಲೆಯ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದೇನೆ. ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಂದ ಈವರೆಗೆ ಪ್ರತಿ ಕುಟುಂಬಕ್ಕೆ 58ಸಾವಿರ ಹಣ ತಲುಪಿದೆ. 5 ಗ್ಯಾರಂಟಿ ಯೋಜನೆಗಳ ಜತೆಗೆ ತಾಲೂಕಿನಲ್ಲಿ ಇಷ್ಟೊಂದು ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿವೆ. ಜನರು ಇದನ್ನು ಅರ್ಥೈಸಿಕೊಳ್ಳಬೇಕು. ಮುಂಬರುವ ಯಾವುದೇ ಚುನಾವಣೆಯಲ್ಲಿಯೂ ನನ್ನ ಕಣ್ಣಲ್ಲಿ ನೀರು ಹಾಕಿಸಬೇಡಿ ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ತಾಲೂಕಿನ ಎ.ಶ್ಯಾನುಭೋಗನಹಳ್ಳಿ, ಸಾಮಕಹಳ್ಳಿ, ಚಾಟಗಹಳ್ಳಿ, ಹೊನ್ನಬೆಟ್ಟದ ಹೊಸೂರು ಗ್ರಾಮಗಳಲ್ಲಿ 7 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವರು, ಚಿಕ್ಕಯಗಟಿ ಗ್ರಾಮದಲ್ಲಿ 40ಲಕ್ಷ ರೂ. ವೆಚ್ಚದ ಗ್ರಾಮ ಪರಿಮಿತಿಯಲ್ಲಿ ರಸ್ತೆ ಅಭಿವೃದ್ಧಿ, ಸಮುದಾಯಭವನ, ಮಾದರಿ ಗ್ರಾಮ ಯೋಜನೆಗೆ ಭೂಮಿ ಪೂಜೆ ನೆರವೇರಿಸಿದರು. ದೊಡ್ಡಯಗಟಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್, ಸಿಪಿಐ ಹೇಮಂತ್‌ಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಂ.ಪ್ರಕಾಶ್, ನಿರ್ದೇಶಕ ಎನ್.ಟಿ.ಕೃಷ್ಣಮೂರ್ತಿ, ಜಿಪಂ ಮಾಜಿ ಸದಸ್ಯ ಎಂ.ಹುಚ್ಚೇಗೌಡ, ಮುಖಂಡರಾದ ರಾಜೇಶ್, ಕೃಷ್ಣೇಗೌಡ, ಹನುಮಂತು, ಮರಿಸ್ವಾಮಿ, ನರಸಿಂಹಮೂರ್ತಿ, ರವೀಶ್, ಗಿರೀಶ್ ಸೇರಿದಂತೆ ಹಲವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net