ಖಾಸಗೀಕರಣ ಕೈಬಿಡುವಂತೆ ಆಗ್ರಹ

ವಿದ್ಯುತ್ ಇಲಾಖೆ, ನಿಗಮ ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ರೈತಸಂಘ ಕಾರ್ಯಕರ್ತರು ಮತ್ತು ಸೆಸ್ಕ್ ಸಿಬ್ಬಂದಿ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ವಿದ್ಯುತ್ ಇಲಾಖೆ, ನಿಗಮ ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ರೈತಸಂಘ ಕಾರ್ಯಕರ್ತರು ಮತ್ತು ಸೆಸ್ಕ್ ಸಿಬ್ಬಂದಿ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
Published on
ಪಾಂಡವಪುರ: ವಿದ್ಯುತ್ ಇಲಾಖೆ, ನಿಗಮಗಳನ್ನು ಖಾಸಗೀಕರಣಗೊಳಿಸದಂತೆ ಆಗ್ರಹಿಸಿ ರೈತಸಂಘ ಕಾರ್ಯಕರ್ತರು ಮತ್ತು ಸೆಸ್ಕ್ ಸಿಬ್ಬಂದಿ ಮಾನವ ಸರಪಳಿ ರಚಿಸಿ ಚಾಮರಾಜನಗರ-ಜೇವರ್ಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಐದು ದೀಪ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ವಿದ್ಯುತ್ ವಿತರಣಾ ಪರವಾನಗಿಯನ್ನು ಖಾಸಗಿ ಕಂಪನಿಗೆ ವರ್ಗಾಯಿಸಿದರೆ ರೈತರು, ಗ್ರಾಹಕರು ಮತ್ತು ನಿಗಮದ ನೌಕರರರಿಗೆ ಸಂಕಷ್ಟ ಎದುರಾಗಲಿದೆ. ಹೀಗಾಗಿ ಸರ್ಕಾರ ಖಾಸಗಿ ಸಂಸ್ಥೆಗೆ ನೀಡದೆ ಸಾರ್ವಜನಿಕರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸರ್ಕಾರಿ ಸ್ವಾಮ್ಯದ ನಿಗಮ ಮತ್ತು ಇಲಾಖೆಗಳನ್ನು ಖಾಸಗೀಕರಣಗೊಳಿಸುವುದು ಬಿಟ್ಟರೆ ಬೇರೇನೂ ಕೆಲಸವಿಲ್ಲ. ರೈತರ ಹಿಡಿತದಲ್ಲಿದ್ದ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಈಗಾಗಲೇ ಖಾಸಗಿಗೆ ಗುತ್ತಿಗೆ ನೀಡಿದ್ದಾರೆ. ಇದೇ ರೀತಿ ಹಲವಾರು ಕಾರ್ಖಾನೆಗಳನ್ನು ಖಾಸಗೀಕರಗೊಳಿಸುವ ಹುನ್ನಾರ ನಡೆಯುತ್ತಿದೆ. ವಿದ್ಯುತ್ ಇಲಾಖೆ, ನಿಗಮ ಖಾಸಗೀಕರಣಗೊಂಡರೆ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ನೀಡುತ್ತಿರುವ ವಿದ್ಯುತ್ ಸ್ಥಗಿತಗೊಳ್ಳುತ್ತದೆ. ಕುಟೀರ ಜ್ಯೋತಿ, ಗಂಗಾ ಕಲ್ಯಾಣ, ಭಾಗ್ಯ ಜ್ಯೋತಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳು ಮೊಟಕುಗೊಳ್ಳುತ್ತವೆ. ಹೀಗಾಗಿ ರೈತಸಂಘ ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣಕ್ಕೆ ಬಿಡುವುದಿಲ್ಲ ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ವೈ.ಪಿ.ಮಂಜು ಮಾತನಾಡಿ, ವಿದ್ಯುತ್ ಇಲಾಖೆ ಖಾಸಗೀಕರಣಗೊಂಡರೆ ನಿಗಮದ 55 ಸಾವಿರ ನೌಕರರ ಭವಿಷ್ಯ ಬೀದಿಗೆ ಬೀಳುತ್ತದೆ. ಅನುಮತಿ ಪಡೆಯುವ ಮುನ್ನ ಸರ್ಕಾರದ ಎಲ್ಲ ಯೋಜನೆಗಳನ್ನು ಮುಂದುವರಿಸುವುದಾಗಿ ಭರವಸೆ ನೀಡುತ್ತಾರೆ. ನಂತರದಲ್ಲಿ ನಿರ್ವಹಣಾ ವೆಚ್ಚ ಸರಿದೂಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣ ನೀಡಿ ಯೋಜನೆಗಳನ್ನು ಕಡಿತಗೊಳಿಸುತ್ತಾರೆ. ಒಮ್ಮೆ ಖಾಸಗೀಕರಣಗೊಂಡರೆ ಬಿಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿಗಮವನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಬಳಿಕ ತಾಲೂಕು ಕಚೇರಿ ಉಪ ತಹಸೀಲ್ದಾರ್ ಮೋಹನ್ ಅವರಿಗೆ ಮನವಿ ಸಲ್ಲಿಸಿದರು. ರೈತ ಸಂಘದ ತಾಲೂಕು ಉಪಾಧ್ಯಕ್ಷ ಡಾಮಡಹಳ್ಳಿ ಅಶೋಕ್, ಕಾರ್ಯದರ್ಶಿ ವೈ.ಜಿ.ರಘು, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಅರಳಕುಪ್ಪೆ ರೂಪಾ, ಸುಷ್ಮಾ, ದೇವರಾಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net