ಮದುವೆ ನೋಂದಣಿ ಮಾಡಿಸಲು ಹೋದ ಯುವತಿಗೆ ಕಾದಿತ್ತು ಶಾಕ್​: ಬಯಲಾಯ್ತು ಗಂಡನ ಮತ್ತೊಂದು ಮುಖ!

Maddur Woman
Published on

ಮಂಡ್ಯ: ಐದು ವರ್ಷ ಪ್ರೀತಿಸಿ ಕೆಲ ತಿಂಗಳಷ್ಟೇ ಮದುವೆಯಾಗಿದ್ದ ಯುವಕ, ಪ್ರೇಯಸಿಗೆ ವಂಚನೆ ಮಾಡಿ ಪರಾರಿಯಾಗಿದ್ದು, ಸಂತ್ರಸ್ತೆ ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ನಡೆದಿದೆ.

ಮದ್ದೂರು ತಾಲೂಕಿನ ಹುಲಿಗೆರೆಪುರದ ನಿವಾಸಿ ತೇಜಸ್ವಿ ಎಂಬ ಯುವಕ ಅದೇ ಗ್ರಾಮದ ಶೃತಿ ಎಂಬಾಕೆಗೆ ಮೋಸ ಮಾಡಿ ಪರಾರಿಯಾಗಿದ್ದಾನೆ. ಇಬ್ಬರು 5 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. 1 ವರ್ಷದ ಹಿಂದೆ ಮೋಸ ಮಾಡಲು ಪ್ರಯತ್ನಿಸಿದಾಗ ಶೃತಿ ಪೊಲೀಸರಿಗೆ ದೂರು ನೀಡಿದ್ದಳು. ವಂಚನೆ, ಅತ್ಯಾಚಾರ ಆರೋಪದಡಿ ಮದ್ದೂರು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿತ್ತು.

ಆ ಬಳಿಕ ಕೇಸ್ ವಾಪಾಸ್ ತೆಗೆಸಲು ತೇಜಸ್ವಿಯಿಂದ ಮದುವೆ ನಾಟಕ ನಡೆದಿದೆ. ಅದರಂತೆಯೇ ನವೆಂಬರ್ 8ರಂದು ಶೃತಿಯನ್ನು ತೇಜಸ್ವಿ ಮದುವೆಯಾಗಿದ್ದ. ಆ ನಂತರ ಮದುವೆ ನೋಂದಣಿ ಮಾಡಲು ಹೋದಾಗ ತೇಜಸ್ವಿ ಮತ್ತೊಂದು ಮುಖ ಬಯಲಾಗಿತ್ತು. ಅಂದರೆ, ಯಾರಿಗು ಗೊತ್ತಿಲ್ಲದೆಯೇ ತೇಜಸ್ವಿ ಮತ್ತೊಂದು ಮದುವೆಯಾಗಿದ್ದ.

ಎಂಟು ತಿಂಗಳ ಹಿಂದೆಯೇ ಮತ್ತೊಬ್ಬ ಯುವತಿಯನ್ನು ತೇಜಸ್ವಿ ಮದುವೆಯಾಗಿದ್ದಾನೆ. ಇತ್ತ ಕೇಸ್ ವಾಪಾಸ್ ತೆಗೆಸಲು ಪ್ರೀತಿಸಿದ ಹುಡುಗಿಗೆ ತಾಳಿ ಕಟ್ಟಿ ವಂಚನೆಯನ್ನು ಮಾಡಿದ್ದಾನೆ. ಮದುವೆ ಬಳಿಕ ಹೆಂಡತಿಯನ್ನು ಸಂಬಂಧಿಕರ ಮನೆಯಲ್ಲಿರಿಸಿ ತೇಜಸ್ವಿ ಇದೀಗ ನಾಪತ್ತೆಯಾಗಿದ್ದಾನೆ.

ಮೊದಲ ಹೆಂಡತಿ ಮನೆಯಲ್ಲಿದ್ದ ತೇಜಸ್ವಿ, 2ನೇ ಹೆಂಡತಿ ಬರ್ತಿದ್ದಂತೆ ಎಸ್ಕೇಪ್ ಆಗಿದ್ದಾನೆ. ಗಂಡನನ್ನು ಹುಡುಕಿ ಬಂದವಳೀಗ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಕಣ್ಣೀರು ಹಾಕಿದ್ದು, ನ್ಯಾಯ ಕೊಡಿಸುವಂತೆ ದೂರು ನೀಡಿದ್ದಾಳೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net