ಮ್ಯೂಸಿಕ್ ಕಿರಿಕ್: ಸೌಂಡ್ ಕಡಿಮೆ ಮಾಡಿ ಅಂದಿದ್ದಕ್ಕೆ ಪ್ರಾಣ ಹೋಗುವಂತೆ ಬಾರಿಸಿದ ಟೆಕ್ಕಿಗಳು!

Music Sound
Published on

ಬೆಂಗಳೂರು: ಕಾರಿನಲ್ಲಿ ಹಾಕಿದ್ದ ಮ್ಯೂಸಿಕ್ ನಿಲ್ಲಿಸುವಂತೆ ಪ್ರಶ್ನಿಸಿದ್ದಕ್ಕೆ ಟೆಕ್ಕಿಗಳಿಂದ ಥಳಿತಕ್ಕೊಳಗಾಗಿದ್ದ ವ್ಯಕ್ತಿಯ ಜೀವ ಉಳಿಸಿಕೊಳ್ಳುವ ಪ್ರಯತ್ನ ಕೊನೆಗೂ ವಿಫಲವಾಗಿದೆ. ಟೆಕ್ಕಿಗಳಿಂದ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಲಾಯೆಡ್ ನೇಹಮಿಯ (54) ಎಂಬ ವ್ಯಕ್ತಿ ಸಾವಿಗೀಡಾಗಿದ್ದಾರೆ.

ಪ್ರಕರಣದ ಸಂಬಂಧ ಒರಿಸ್ಸಾ ಮೂಲದ ರಾಮ ಸಮಂತ್, ಬಾಸುದೇವ್ ಸಮಂತ್ ರಾಯ್ ಎಂಬುವರನ್ನು ಬಂಧಿಸಲಾಗಿದೆ. ಏ. 2ರಂದು ಬೆಳಗ್ಗಿನ ಜಾವ 4.30ರ ಸುಮಾರಿಗೆ ವಿಜ್ಞಾನ ನಗರದ ಖಾಸಗಿ ಅಪಾರ್ಟ್‌ಮೆಂಟ್ ಮುಂದಿನ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಈ ಸಂಬಂಧ ಮೊದಲು ಹಲ್ಲೆ ಪ್ರಕರಣ ದಾಖಲಾಗಿತ್ತು. ಇದೀಗ ಹಲ್ಲೆಗೊಳಗಾಗಿದ್ದ ಲಾಯೆಡ್ ನೇಹಮಿಯ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ 2ರಂದು ಬೆಳಗ್ಗಿನ ಜಾವ 4.30ರ ಸುಮಾರಿಗೆ ವಿಜ್ಞಾನ ನಗರದ ಖಾಸಗಿ ಅಪಾರ್ಟ್‌ಮೆಂಟ್ ಮುಂದಿನ ರಸ್ತೆಯಲ್ಲಿ ಅಭಿಷೇಕ್, ರಾಮ ಸಮಂತ್, ಬಾಸುದೇವ್ ಮತ್ತು ಸಮಂತ್ ರಾಯ್ ಕಾರನ್ನು ನಿಲ್ಲಿಸಿಕೊಂಡು ಜೋರಾಗಿ ಹಾಡುಗಳನ್ನು ಹಾಕಿಕೊಂಡಿದ್ದರು. ಈ ವೇಳೆ ಲಾಯೆಡ್ ನೇಹಮಿಯ ಬಂದು ಸೌಂಡ್ ಕಡಿಮೆ ಮಾಡಿ, ಮನೆಯಲ್ಲಿ ವಯಸ್ಸಾದವರು ಇದ್ದಾರೆ ಎಂದು ಹೇಳಿದ್ದರು. ಈ ವೇಳೆ ಲಾಯೆಡ್ ಜತೆ ಗಲಾಟೆ ಮಾಡಿದ್ದ ಆರೋಪಿಗಳು ಆತನನ್ನು ಹಿಡಿದು ಚೆನ್ನಾಗಿ ಥಳಿಸಿ, ಕಲ್ಲು, ಚಪ್ಪಲಿಗಳಿಂದ ಹಲ್ಲೆ ಮಾಡಿದ್ದರು. ಇದೇ ವೇಳೆ ಮಹಿಳೆಯೊಬ್ಬರ ಮೇಲೆಯೂ ಆರೋಪಿಗಳು ಹಲ್ಲೆ ಮಾಡಿದ್ದರು.

ಬಳಿಕ ಹಲ್ಲೆಗೊಳಗಾದ ಲಾಯೆಡ್ ಮತ್ತು ಆರೋಪಿಗಳು ಎಚ್‌ಎಎಲ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಿಸಿದ್ದರು. ಗಲಾಟೆ ಬಳಿಕ ಅಸ್ಪತ್ರೆಯಲ್ಲಿ ದಾಖಲಾಗಿದ್ದ ಲಾಯೆಡ್ ನೇಹಮಿಯ ಮಂಗಳವಾರ ತಡರಾತ್ರಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಎಚ್‌ಎಎಲ್ ಠಾಣೆ ಪೊಲೀಸ್ ಅಧಿಕಾರಿಗಳು ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net