ಲೋಕಾಯುಕ್ತ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ದೂರುದಾರ!; ಸೈಟ್​ ಕಬಳಿಕೆ ಬಗ್ಗೆ ದೂರು ಕೊಡಲು ಬಂದಿದ್ದ ಯುವಕ..

Lokayuktha
Published on

ಬೆಂಗಳೂರು: ನಿವೇಶನ ಕಬಳಿಕೆ ಆಗಿದ್ದರ ಕುರಿತು ದೂರು ನೀಡಲು ಲೋಕಾಯುಕ್ತ ಪ್ರಧಾನ ಕಚೇರಿಗೆ ಬಂದಿದ್ದ ಯುವಕನೊಬ್ಬ ಅಲ್ಲಿಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬೆಂಗಳೂರಿನ ಸರ್ಜಾಪುರ ರಸ್ತೆಯ ಅಸರಪ್ಪ ಬಡಾವಣೆ ನಿವಾಸಿ ಮಂಜುನಾಥ್ (32), ಆತ್ಮಹತ್ಯೆಗೆ ಯತ್ನಿಸಿದ ಯುವಕ.

ತಾಯಿ ಮತ್ತು ಸಹೋದರಿ ಜತೆ ನೆಲೆಸಿರುವ ಮಂಜುನಾಥ್ ಅವರ ತಂದೆ 10 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇದಕ್ಕೂ ಮೊದಲು ಮಂಜುನಾಥ್ ತಂದೆ ಸುಂಕದಕಟ್ಟೆಯಲ್ಲಿ ಸೈಟ್ ಖದೀರಿಸಿದ್ದರು. ಈ ನಿವೇಶನ ಅಡವಿಟ್ಟು 50 ಸಾವಿರ ರೂ. ಪಡೆದಿದ್ದಾರೆ ಎಂದು ಹೇಳಿ ಕೇಶವ ಎಂಬಾತ ನಿವೇಶನವನ್ನು ತನ್ನ ಸ್ವಾಧೀನಕ್ಕೆ ಪಡೆದಿದ್ದ. ಇದರಿಂದ ನೊಂದ ಮಂಜುನಾಥ್, ಸೈಟ್ ವಶಕ್ಕೆ ಪಡೆಯಲು ಎಷ್ಟೇ ಪ್ರಯತ್ನ ಮಾಡಿದರೂ ಪ್ರಯೋಜನ ಆಗಿರಲಿಲ್ಲ.

ತನ್ನ ತಂದೆಗೆ ಕೇಶವ ಎಂಬಾತ 50 ಸಾವಿರ ರೂ. ಕೊಟ್ಟ ರೀತಿ ಪತ್ರ ಬರೆದುಕೊಂಡು ಸೈಟ್ ಕಬಳಿಸಲು ಯತ್ನಿಸುತ್ತಿದ್ದಾನೆ ಎಂದು ಲೋಕಾಯುಕ್ತರಿಗೆ ದೂರು ಕೊಡಲು ಮಂಜುನಾಥ್ ನಿರ್ಧರಿಸಿದ್ದ. ದೂರು ಬರೆದುಕೊಂಡು ಡಿ.17ರ ಮಧ್ಯಾಹ್ನ 12 ಗಂಟೆಗೆ ಲೋಕಾಯುಕ್ತ ಪ್ರಧಾನ ಕಚೇರಿಗೆ ಬಂದ ಮಂಜುನಾಥ್, ಸ್ವಾಗತಕಾರರ ವಿಭಾಗಕ್ಕೆ ದೂರಿನ ಪ್ರತಿ ಕೊಟ್ಟಿದ್ದಾರೆ.

ದೂರು ನೀಡಿದ ಸ್ವಲ್ಪ ಹೊತ್ತಿನಲ್ಲೇ ಮಂಜುನಾಥ್​ ಏಕಾಏಕಿ ಕುಸಿದು ಬಿದ್ದು ಬಾಯಲ್ಲಿ ನೊರೆ ಬಂದಿದೆ. ಕಚೇರಿ ಸಿಬ್ಬಂದಿ, ರಿಜಿಸ್ಟ್ರಾರ್ ಗಮನಕ್ಕೆ ತಂದು ಕಚೇರಿ ಕಾರಿನಲ್ಲಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿದ ವಿಧಾನಸೌಧ ಪೊಲೀಸರು ಆಸ್ಪತ್ರೆಗೆ ಭೇಟಿ ಕೊಟ್ಟು ಮಾಹಿತಿ ಪಡೆದಿದ್ದಾರೆ. ದೂರು ಕೊಡಲು ಲೋಕಾಯುಕ್ತ ಕಚೇರಿಗೆ ಬರುವ ಮೊದಲೇ ವಿಷ ಸೇವಿಸಿರುವ ಮಂಜುನಾಥ್, ತಾನು ಸಾವಿಗೀಡಾದರೆ ತನ್ನ ಕುಟುಂಬಕ್ಕೆ ಅನ್ಯಾಯ ಮಾಡಿರುವ ಕೇಶವನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಎಲ್ಲ ವಿಷಯ ಲೋಕಾಯುಕ್ತರ ಗಮನಕ್ಕೆ ಬಂದಿದ್ದು, ಅವರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದ ಮಂಜುನಾಥ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net