ಯುಗಾದಿ ಶಾಕ್ : ಅತ್ತೆ-ಮಾವನಿಗೆ ಚೂರಿ ಇರಿದ ಅಳಿಯ ಈಗ ಪೊಲೀಸರ ಅತಿಥಿ !

arrest
Published on

ದೊಡ್ಡಬಳ್ಳಾಪುರ : ಯುಗಾದಿ ಹಬ್ಬದ ಸಮಯಕ್ಕೆ ಅಳಿಯಂದಿರು ಅತ್ತೆ-ಮಾವನ ಮನೆಗೆ ಹೋಗಿ ಉಪಚಾರ ಮಾಡಿಸಿಕೊಳ್ಳುವುದು ಸಾಮಾನ್ಯ ವಿಚಾರ. ಆದರೆ, ಇಲ್ಲೊಬ್ಬ ತನ್ನ ಅತ್ತೆ ಮಾವನಿಗೆ ಚಾಕುವಿನಿಂದ ಇರಿದು, ಪೊಲೀಸರ ಅತಿಥಿಯಾಗಿರುವ ಪ್ರಸಂಗ ವರದಿಯಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಮುತ್ಯಾಲಮ್ಮ ದೇವಸ್ಥಾನ ಬೀದಿಯಲ್ಲಿ ಅತ್ತೆ ಮನೆಗೆ ನುಗ್ಗಿದ ಅಳಿಯ ಅತ್ತೆ ಹಾಗೂ ಮಾವನ ಮೇಲೆ ಚೂರಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಮಾವ ಶ್ರೀನಿವಾಸ್(65) ಹಾಗೂ ಅತ್ತೆ ಜಯಮ್ಮ (60) ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಅಳಿಯ ಮಂಜುನಾಥ್(40)ನನ್ನು ದೊಡ್ಡಬಳ್ಳಾಪುರ ಪಟ್ಟಣ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.

ಇಪ್ಪತ್ತೆರಡು ವರ್ಷದ ಹಿಂದೆ ಮದುವೆಯಾಗಿದ್ದ ಮಂಜುನಾಥ್ ಹಾಗೂ ಅನುಸೂಯ ದಂಪತಿ, ಮಕ್ಕಳೊಂದಿಗೆ ಗೌರಿಬಿದನೂರಿನ ದೋಭಿ ಕಾಲನಿಯಲ್ಲಿ ವಾಸವಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ್ ಮದ್ಯಕ್ಕೆ ದಾಸನಾಗಿದ್ದು, ಪತ್ನಿಯೇ ಮನೆ ನಿರ್ವಹಣೆ ಮಾಡುತ್ತಿದ್ದರು ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ದಂಪತಿ ನಡುವೆ ವೈಮನಸ್ಯ ಹುಟ್ಟಿ, ಪತ್ನಿ ಅನಸೂಯ ದೊಡ್ಡಬಳ್ಳಾಪುರದ ತವರುಮನೆಗೆ ಬಂದಿದ್ದರು. ಇದರಿಂದ ಕುಪಿತಗೊಂಡಿದ್ದ ಆರೋಪಿ ಅತ್ತೆ ಮನೆಗೆ ನುಗ್ಗಿ ಪತ್ನಿಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದ. ಈ ವೇಳೆ ಅಡ್ಡ ಬಂದ ಅತ್ತೆ ಮತ್ತು ಮಾವನಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net