ಟೀಚರ್​​ಗೆ ಗಿಫ್ಟ್ ತಂದಿದೀನಿ ಎನ್ನುತ್ತಾ ಮಚ್ಚಿನಿಂದ ಹಲ್ಲೆ ಮಾಡಿದ ಯುವಕ!

diet
Published on

ಮಂಗಳೂರು: ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ(ಡಯಟ್​) ಕಛೇರಿಗೆ ನುಗ್ಗಿದ ಯುವಕನೊಬ್ಬ ಏಕಾಏಕಿ ಅಲ್ಲಿನ ಮೂವರು ಮಹಿಳಾ ಸಿಬ್ಬಂದಿಗಳ ಮೇಲೆ ಮಚ್ಚಿನಿಂದ ಹಲ್ಲೆ ಎಸಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಸೋಮವಾರ ಮಧ್ಯಾಹ್ನ 12.45ರ ಸುಮಾರಿಗೆ ಮಂಗಳೂರಿನ ಕಾರಾಗೃಹದ ಪಕ್ಕದ ಕಾಂಪೌಂಡ್‌ನಲ್ಲಿರುವ ಡಯಟ್‌ ಕಚೇರಿಗೆ ಬಂದ ಸುಮಾರು 35 ವರ್ಷದ ಯುವಕ, ಟೀಚರ್‌ ಒಬ್ಬರ ಹೆಸರು ತೆಗೆದು ಅವರಿದ್ದಾರೆಯೇ ಎಂದು ವಿಚಾರಿಸಿದ್ದಾನೆ. ಟೀಚರ್​​ಗೆ ಗಿಫ್ಟ್​ ಕೊಡಲಿಕ್ಕಿದೆ ಎಂದು ಹೇಳಿದ್ದಾನೆ. ಸಿಬ್ಬಂದಿ ಆ ಬಗ್ಗೆ ಮಾಹಿತಿ ಇಲ್ಲದೆ ಯಾರು ಎಂದು ಯೋಚಿಸುತ್ತಿರುವಂತೆಯೇ, ಯುವಕ ಏಕಾಏಕಿ ಮಚ್ಚು ಹೊರತೆಗೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಮಹಿಳೆಯರ ಕಿರುಚಾಟ ಕೇಳಿ ಸಾರ್ವಜನಿಕರು, ಜೈಲಿನ ಸಿಬ್ಬಂದಿಗಳು ಓಡಿ ಬಂದಿದ್ದು, ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೇಲ್ನೋಟಕ್ಕೆ ಈ ಘಟನೆ ಯಾಕೆ ಸಂಭವಿಸಿದೆ ಎಂದು ತಿಳಿದುಬಂದಿಲ್ಲ. ಯುವಕ ಯಾರು, ಈ ರೀತಿ ಯಾಕೆ ಮಾಡಿದ ಎಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಆಯುಕ್ತ ಶಶಿಕುಮಾರ್‌ ಹೇಳಿದ್ದಾರೆ.

ಸಾಮಾನ್ಯವಾಗಿ ಹಳೇ ವಿದ್ಯಾರ್ಥಿಗಳು, ತರಬೇತಿದಾರರು ಡಯಟ್‌ ಕಚೇರಿಗೆ ಬರುತ್ತಿರುತ್ತಾರೆ. ಹಾಗಾಗಿ ಬಂದವನ ಮೇಲೆ ಮಹಿಳೆಯರಿಗೆ ಹೆಚ್ಚಿನ ನಿಗಾ ಇರಲಿಲ್ಲ. ದಿಢೀರನೆ ನಡೆದ ಹಲ್ಲೆಗೆ ರೀನಾ, ಗುಣವತಿ ಮತ್ತು ನಿರ್ಮಲ ಎಂಬುವರಿಗೆ ತಲೆ, ಕೈ, ಬೆನ್ನು ಮುಂತಾದೆಡೆ ಗಾಯಗಳಾಗಿವೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net