ಸ್ಟ್ರೋಕ್ ಆಗಿ ಹೆಂಡ್ತಿ ಸತ್ಲು ಎಂದ ಪತಿರಾಯ! ಮರಣೋತ್ತರ ಪರೀಕ್ಷೆಯಿಂದಾಗಿ ಬಯಲಾಯ್ತು ರಹಸ್ಯ

ಬನಗಲರ
Published on

ಬೆಂಗಳೂರು: ಅಯ್ಯೋ, ನನ್ನ ಹೆಂಡತಿಗೆ ಸ್ಟ್ರೋಕ್ ಆಗಿಬಿಟ್ಟಿದೆ ಎಂದು ಸುಳ್ಳು ಹೇಳಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಪತಿರಾಯನ ರಹಸ್ಯ ಇದೀಗ ಬಯಲಾಗಿದೆ.

ಬಿಟಿಎಂ 2ನೇ ಹಂತದ ನಿವಾಸಿಯಾಗಿದ್ದ ಸಾನಿಯಾಗೆ ಸ್ಟ್ರೋಕ್ ಆಗಿದೆ ಎಂದು ಆಕೆಯ ಗಂಡ ಅಜಿತ್ ಜೂನ್ 29ರಂದು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ. ಅಲ್ಲಿ ದಾಖಲಾದ ಸಾನಿಯಾ ಮಾರನೇ ದಿನ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು. ಆಕೆಯ ಮೃತ ದೇಹವನ್ನು ನೋಡಲು ಬಂದು ತಾಯಿಗೆ ಮಗಳು ಕೊಲೆಯಾದ ಬಗ್ಗೆ ಅನುಮಾನ ಹುಟ್ಟಿತ್ತು. ಆಕೆ ಪೊಲೀಸರಿಗೆ ಈ ಕುರಿತಾಗಿ ದೂರು ನೀಡಿದ್ದಾಳೆ.

ಸಾನಿಯಾಳ ಮೃತ ದೇಹದ ಮರಣೋತ್ತರ ಪರೀಕ್ಷೆ ಮಾಡಿದ್ದು, ಅದರಲ್ಲಿ ಕೊಲೆಯ ರಹಸ್ಯ ಬಯಲಾಗಿದೆ. ಅಜಿತ್ ಮತ್ತು ಸಾನಿಯಾ ನಡುವೆ ಜಗಳ ನಡೆದಿದ್ದು, ಆತ ಸಿಟ್ಟಿನಿಂದ ಹೆಂಡತಿಗೆ ಹೊಡೆದಿದ್ದಾನೆ. ಆ ವೇಳೆ ಸಾನಿಯಾ ತಲೆಗೆ ಬಲವಾಗಿ ಪೆಟ್ಟು ಬಿದ್ದಿದೆ. ಅದರಿಂದಾಗಿ ಹೆಚ್ಚಿನ ರಕ್ತಸ್ರಾವ ಆಗಿದ್ದು ಆಕೆ ಸಾವನ್ನಪ್ಪಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.

ಈ ವಿಚಾರ ತಿಳಿಯುತ್ತಿದ್ದಂತೆ ಮೈಕೊಲೇಔಟ್ ಪೊಲೀಸರು ಅಜಿತ್​ನನ್ನು ಬಂಧಿಸಿದ್ದಾರೆ. ಆತನ ಬಾಯಿಯಲ್ಲೇ ಕೊಲೆಯ ಬಗ್ಗೆ ಸತ್ಯವನ್ನು ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net