ಹೆಗ್ಗಣಗಳಿಂದ ಸಿಲಿಂಡರ್​ ಪೈಪ್​ ಕಟ್​; ನ್ಯಾಯ ಕೊಡಿಸುವಂತೆ ಪೊಲೀಸರ ಮೊರೆ ಹೋದ ವ್ಯಕ್ತಿ

Rats
Published on

ಹುಬ್ಬಳ್ಳಿ: ಸಾಮಾನ್ಯವಾಗಿ ನಾವು ನೋಡಿದಂತೆ ಮನೆಗಳಲ್ಲಿ ಇಲಿ-ಹೆಗ್ಗಣಗಳ ಕಾಟ ನಿಯಂತ್ರಿಸುವುದು ಕೆಲವೊಮ್ಮೆ ಬಹುದೊಡ್ಡ ಸವಾಲಾಗುತ್ತದೆ. ಗ್ಯಾರೇಜ್‌, ಕೈತೋಟ, ಅಡುಗೆ ಮನೆ ಸೇರಿದಂತೆ ಅನೇಕ ಕಡೆ ನೆಲೆಸಿರುತ್ತವೆ. ಅವುಗಳನ್ನು ಜೀವಂತವಾಗಿ ಹಿಡಿಯುವುದು ಅಷ್ಟು ಸುಲಭದ ಮಾತಲ್ಲ. ಇವುಗಳನ್ನು ಕೊಲ್ಲಲು ಜನರು ಔಷಧಿ ಹಾಗೂ ಸ್ಟಿಕ್​ಪ್ಯಾಡ್​ಗಳ ಮೊರೆ ಹೋಗುತ್ತಾರೆ. ಆದರು ನಿಯಂತ್ರಣಕ್ಕೆ ಬಾರದಿದ್ದಾಗ ಜನ ಹೈರಾಣಾಗಿ ಸುಮ್ಮನಾಗಿ ಬಿಡುತ್ತಾರೆ.

ಇದೀಗ ಇದಕ್ಕೆ ಸಂಬಂಧಿಸಿದಂತೆ ಘಟನೆ ಒಂದು ನಡೆದಿದ್ದು, ಹೆಗ್ಗಣಗಳ ಕಾಟದಿಂದ ಬೇಸತ್ತು ವ್ಯಕ್ತಿಯೊಬ್ಬರು ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹಳೇ ಹುಬ್ಬಳ್ಳಿಯ ಆನಂದನಗರದ ನಿವಾಸಿ ಅನಿಲ್​ ಮುಂಡರಗಿ ಎಂಬುವವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

Rat complaint

ದೂರಿನಲ್ಲಿ ಏನಿದೆ?

ನಮ್ಮ ನೆರೆಯ ಮನೆಯ ನಿವಾಸಿಯಾದ ಸಿದ್ದು ಅಂಗಡಿ ಎಂಬುವವರಿಗೆ ಸೇರಿದ ಮನೆ ಪಾಳುಬಿದ್ದ ಸ್ಥಿತಿಯಲ್ಲಿದ್ದು, ಈ ಮನೆಯೊಳಗೆ ವಿಪರೀತ ಹೆಗ್ಗಣಗಳಿವೆ. ಈ ಹೆಗ್ಗಣಗಳು ಬಲ ತೋಡಿಕೊಂಡು ನಮ್ಮ ಅಡುಗೆ ಮನೆಯೊಖಳಗೆ ನುಗ್ಗಿದ್ದು, ಗ್ಯಾಸ್​ ಸಿಲಿಂಡರ್​ ಪೈಪ್​, ಸಿಂಕ್​ ಪೈಪ್​ಗಳನ್ನು ಹಾಳು ಮಾಡಿದ್ದು, ಇದರಿಂದ ನಮಗೆ ಬಹಳ ತೊಂದರೆಯಾಗಿದೆ. ಈ ಸಂಬಂಧ ನರೆಯ ಮನೆಯ ಮಾಲೀಕರ ಗಮನಕ್ಕೆ ತಂದಾಗ ಅವರು ನಮ್ಮ ಮೇಲೆ ಜಗಳಕ್ಕೆ ಬಂದಿದ್ದು, ಪೊಲೀಸ್​ ದೂರು ಕೊಡುವುದಾಗಿ ಹೇಳಿದರೂ ಯಾವುದಕ್ಕೂ ಹೆದರುತ್ತಿಲ್ಲ. ಈ ಸಂಬಂಧ ನೀವುಗಳು ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ನಮಗೆ ಸೂಕ್ತ ವ್ಯವಸ್ಥೆ ಮಾಡಿಸಬೇಕೆಂದು ದೂರುದಾರರಾದ ಅನಿಲ್​ ಅವರು ತಮ್ಮ ಕಂಪ್ಲೇಂಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಳೇ ಹುಬ್ಬಳ್ಳಿ ಪೊಲೀಸ್​ ಠಾಣಾಧಿಕಾರಿ ಹೆಗ್ಗಣಗಳು ಕಾಟ ಕೊಡುತ್ತಿರುವುದು ನಮ್ಮ ವ್ಯಾಪ್ತಿಗೆ ಬಾರದಿರುವ ಕಾರಣ ಅದನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ವರ್ಗಾಯಿಸಲಾಗಿದೆ. ಗಲಾಟೆ ವಿಚಾರವಾಗಿ ನೆರೆ ಮನೆಯ ಮಾಲೀಕರನ್ನು ಕರೆದು ವಿಚಾರಿಸಲಾಗುವುದು ಎಂದು ಹಳೇ ಹುಬ್ಬಳ್ಳಿ ಪೊಲೀಸ್​ ಠಾಣಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net