

ಉತ್ತರಕನ್ನಡ: ಕೋವಿಡ್ ಮೂರನೇ ಅಲೆ ಆತಂಕ ಹೊಸ ಬದುಕಿನ ಕನಸಿನಲ್ಲಿರುವ ಇವರಿಬ್ಬರಿಗೂ ಚಿಂತೆ ತಂದಿದ್ದಲ್ಲದೆ, ಕುಟುಂಬದವರು ಎರಡು ಗಂಟೆಗೂ ಅಧಿಕ ಕಾಲ ಗಡಿಭಾಗದಲ್ಲಿ ಗಡಿಬಿಡಿಗೊಳ್ಳುವಂಥ ಪರಿಸ್ಥಿತಿ ಸೃಷ್ಟಿಯಾಗಿತ್ತು. ಕರ್ನಾಟಕ-ಗೋವಾ ಗಡಿಪ್ರದೇಶದಲ್ಲಿ ಇಂಥದ್ದೊಂದು ಸನ್ನಿವೇಶ ಸೃಷ್ಟಿಯಾಗಿತ್ತು.
ಕೋವಿಡ್ ಮೂರನೇ ಅಲೆಯ ಪ್ರವೇಶದ ಆತಂಕದ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲಾಡಳಿತ ಗೋವಾ-ಕಾರವಾರ ಗಡಿಯಲ್ಲಿ ಬಿಗಿಕ್ರಮ ಕೈಗೊಂಡಿದ್ದರಿಂದ ನಿಶ್ಚಿತಾರ್ಥಕ್ಕೆ ಅಣಿಯಾಗಿದ್ದ ಎರಡು ಕುಟುಂಬಗಳು ಇಂದು ಚಿಂತೆಗೆ ಒಳಗಾಗುವಂತೆ ಆಗಿದೆ. ಕಾರವಾರದ ಯುವತಿ ಹಾಗೂ ಗೋವಾದ ಯುವಕನ ಮಧ್ಯೆ ಇಂದು ಕಾರವಾರದಲ್ಲಿ ನಿಶ್ಚಿತಾರ್ಥ ನಿಗದಿಯಾಗಿತ್ತು.
ನಿಶ್ಚಿತಾರ್ಥದ ಹಿನ್ನೆಲೆಯಲ್ಲಿ ಯುವಕನ ಕಡೆಯವರು ಆಗಮಿಸುತ್ತಿದ್ದಾಗ ಅವರನ್ನು ಗಡಿಭಾಗದಲ್ಲೇ ತಡೆಯಲಾಗಿತ್ತು. ಯಾರ ಬಳಿಯೂ ಆರ್ಟಿಪಿಸಿಆರ್ ವರದಿ ಇರದ್ದರಿಂದ ಪೊಲೀಸರು ಅವರಿಗೆ ಪ್ರವೇಶ ನಿರಾಕರಿಸಿದ್ದರು. ಹೀಗಾಗಿ ಯುವಕನ ಕಡೆಯುವರು ಸುಮಾರು 2 ಗಂಟೆ ಕಾಲ ಪರದಾಡುವಂತಾಗಿತ್ತು. ಕೊನೆಯಲ್ಲಿ ಎಂಟು ಜನರಿಗೆ ಮಾತ್ರ ನಿಶ್ಚಿತಾರ್ಥಕ್ಕೆ ತೆರಳಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದರಿಂದ ಉಳಿದವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಗೋವಾಗೆ ಮರಳಬೇಕಾಯಿತು.