ಜಲಪಾತದಲ್ಲಿ ಈಜಲು ಹೋಗಿ ಮಂಗಳೂರು ಮೂಲದ ವಿದ್ಯಾರ್ಥಿ ಮೃತ್ಯು

Deceased Youth
Published on

ತಿರುಪತಿ: ಜಲಪಾತದಲ್ಲಿ ಈಜಲು ಹೋಗಿ ಯುವಕನೋರ್ವ ಶವವಾಗಿ ಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದ ತಿರುಪಪತಿ ಬಳಿ ಇರುವ ತಲಕೋನಾ ಜಲಪಾತದಲ್ಲಿ ನಡೆದಿದೆ.

ಮೃತರನ್ನು ಸುಮಂತ್​(22) ಎಂದು ಗುರುತಿಸಲಾಗಿದ್ದು, ಮಂಗಳೂರು ಮೂಲದವರು ಎಂದು ತಿಳಿದು ಬಂದಿದೆ. ತಮಿಳುನಾಡಿನ ಚೆನ್ನೈನಲ್ಲಿರುವ ರಾಜೀವ್​ ಗಾಂಧಿ ವಿಶ್ವವಿದ್ಯಾಲಯದಲ್ಲಿ ಎಂಎಸ್​ಸಿ ಪದವಿ ವ್ಯಾಸಂಗ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಬಂಡೆಗಳ ನಡುವೆ ಸಿಲಕಿ ಮೃತ್ಯು

ಸುಮಂತ್​ ಸ್ನೇಹಿತರ ಜೊತೆ ತಿರುಒತಿ ಬಳಿ ಇರುವ ತಲಕೋನ ಜಲಪಾತಕ್ಕೆ ಬಂದಿದ್ದಾರೆ. ಈ ವೇಳೆ ಅವರು ನೀರಿಗೆ ಧುಮುಕುತ್ತಿರುವ ವಿಡಿಯೋವನ್ನು ಮೊಬೈಲ್​ ಫೋನಿನಲ್ಲಿ ಚಿತ್ರೀಕರಿಸುವಂತೆ ಹೇಳಿದ್ದಾರೆ. ಅದರಂತೆ ಸ್ನೇಹಿತರು ಕೂಡ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.

ನೀರಿಗೆ ಧುಮುಕಿ ತುಂಬಾ ಸಮಯ ಕಳೆದರೂ ಸಹ ಸುಮಂತ್​ ಮೇಲೆ ಬಾರದಿರುವುದನ್ನು ಗಮನಿಸಿದ ಸ್ನೇಹಿತರು ಕೂಡಲೇ ಹತ್ತಿರದ ಪೊಲೀಸ್​ ಠಾಣೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗೆ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿ ಬಂಡೆಗಳ ನಡುವೆ ಸಿಲುಕಿಕೊಂಡಿದ್ದ ಸುಮಂತ್​ ತಲೆಯನ್ನು ಬಿಡಿಸಿ ಮೃತದೇಹವನ್ನು ಹೊರ ತೆಗೆದಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕಳೆದ ಕೆಲ ತಿಂಗಳುಗಳ ಅವಧಿಯಲ್ಲಿ ತಲಕೋನ ಜಲಪಾತದಲ್ಲಿ ನಡೆದ ಮೂರನೇ ಅವಘಡ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net