

ಉಡುಪಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಬಿಸಿಲಿನಿಂದ ರಕ್ಷಣೆ ಪಡೆಯಲು ಆರೋಗ್ಯ ಇಲಾಖೆ ಜನರಿಗೆ ಸೂಚನೆಗಳನ್ನು ನೀಡುತ್ತಿದೆ. ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ತಾಪಮಾನ ಹೆಚ್ಚಳವಾಗಿದ್ದು, ಇದಕ್ಕೆ ಸಂಬಂಧಿಸಿದಂ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಬದಿಯಪ್ಪ (37) ಎಂದು ಗುರುತಿಸಲಾಗಿದೆ. ತಾಪಮಾನ ಹೆಚ್ಚಾಗಿದ್ದ ಕಾರಣ ನಿಶಕ್ತಯಿಂದ ಬಳಲಿ ಬದಿಯಪ್ಪ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ರಾಜ್ಯದ ಹಲವು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳು, ದಕ್ಷಿಣ ಒಳನಾಡು, ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಹಲವು ಭಾಗಗಳಿಗೆ ಹವಾಮಾನ ಇಲಾಖೆ ನಾಲ್ಕು ದಿನಗಳ ಉಷ್ಣ ಮಾರುತದ ಆರೆಂಜ್ ಅಲರ್ಟ್ ಘೋಷಿಸಿದೆ.