ಅಪ್ಪನಿಗೆ ಹೊಡೆದವರನ್ನು ಮಕ್ಕಳು ಬಡಿದು ಕೊಂದರು; ಅಮಲಿನಲ್ಲಿ ನಡೆದಿದ್ದು ಕೊಲೆಯಲ್ಲಿ ಕೊನೆಗೊಂಡಿತು!

Crime Scene
Published on

ಬೆಂಗಳೂರು: ಮದ್ಯದ ಅಮಲಿನಲ್ಲಿ ಗಲಾಟೆಗಳು ನಡೆಯುವುದು ಸರ್ವೇಸಾಮಾನ್ಯ. ಆದರೆ ಪಾನಮತ್ತರ ನಡುವೆ ನಡೆದ ಈ ಗಲಾಟೆ ಕೊಲೆಯಲ್ಲಿ ಕೊನೆಗೊಂಡಿದೆ. ಅಷ್ಟಕ್ಕೂ ಆತ ಸ್ನೇಹಿತನ ಮಕ್ಕಳಿಂದಲೇ ಕೊಲೆಯಾದ ಅಪರೂಪದ ಪ್ರಕರಣವೊಂದು ಬೆಂಗಳೂರಿನಲ್ಲಿ ವರದಿಯಾಗಿದೆ.

ಇರ್ಫಾನ್​ ಎಂಬಾತ ಕೊಲೆಗೀಡಾಗಿದ್ದು, ಆತನ ಸ್ನೇಹಿತ ಗೋಪಿ ಎಂಬಾತನ ಮಕ್ಕಳೇ ಆರೋಪಿಗಳು. ಬೆಂಗಳೂರಿನ ವಿವೇಕನಗರದ ನೀಲಸಂದ್ರದಲ್ಲಿ ಬುಧವಾರ ತಡರಾತ್ರಿ ಈ ಘಟನೆ ಸಂಭವಿಸಿದೆ. ಬುಧವಾರ ರಾತ್ರಿ ಇರ್ಫಾನ್​, ಗೋಪಿ ಹಾಗೂ ಪುನೀತ್ ಎಂಬವರು ಜೊತೆಯಾಗಿ ಮದ್ಯಪಾನ ಮಾಡುತ್ತ ಕುಳಿತಿದ್ದರು. ಈ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಇವರ ಮಧ್ಯೆ ಗಲಾಟೆ ನಡೆದಿದೆ. ಸಿಟ್ಟಿನ ಭರದಲ್ಲಿ ಗೋಪಿ ಮತ್ತು ಪುನೀತ್ ಮೇಲೆ ಇರ್ಫಾನ್​ ಹಲ್ಲೆ ಮಾಡಿದ್ದ. ಇದು ಕೆಲವೇ ಕ್ಷಣಗಳಲ್ಲಿ ಗೋಪಿಯ ಪುತ್ರರಿಗೂ ತಿಳಿದಿದ್ದರಿಂದ ಪ್ರಕರಣ ವಿಕೋಪಕ್ಕೆ ತೆರಳಿತ್ತು.

ತಂದೆ ಗೋಪಿಗೆ ಇರ್ಫಾನ್ ಹೊಡೆದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪುತ್ರರು, ಇರ್ಫಾನ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಹೊಡೆತದ ತೀವ್ರತೆಗೆ ಇರ್ಫಾನ್ ಸ್ಥಳದಲ್ಲೇ ಕುಸಿದು ಬಿದ್ದಿದ್ದ. ತಕ್ಷಣವೇ ಇರ್ಫಾನ್​​ನನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಬದುಕುಳಿಯಲಿಲ್ಲ. ಹಲ್ಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ವಿವೇಕನಗರ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net