ತನ್ನಿಂದ ಗರ್ಭಿಣಿಯಾದ ಬಾಲಕಿಯನ್ನು ಮದ್ವೆಯಾಗ್ತೇನೆಂದ ವಿವಾಹಿತ- ಅಮ್ಮನ ಸಮ್ಮತಿ; ಕೋರ್ಟ್​ ನೀಡಿತು ಜಾಮೀನು

pregnant
Published on

ಮುಂಬೈ: ಇದು 16 ವರ್ಷದ ಅಪ್ರಾಪ್ತ ಬಾಲಕಿ ವಿವಾಹಿತನೊಬ್ಬನಿಗೆ ಗರ್ಭಿಣಿಯಾಗಿ ಮಗುವಿನ ಅಮ್ಮನಾಗಿರುವ ಘಟನೆ. ಅತ್ಯಾಚಾರದ ಕೇಸ್​ನಲ್ಲಿ ಆರೋಪಿ ಜೈಲುಶಿಕ್ಷೆಗೆ ಒಳಗಾಗಿದ್ದ. ಇದೀಗ ಆತ ತಾನು ಬಾಲಕಿಯನ್ನು ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದಾನೆ.

ಈ ನಡುವೆಯೇ, ತನ್ನ ಮಗಳನ್ನು ಗರ್ಭಿಣಿ ಮಾಡಿದ ಈ ವಿವಾಹಿತನಿಗೆ ಜಾಮೀನು ನೀಡುವಂತೆ ಬಾಲಕಿಯ ತಾಯಿಯೂ ಕೋರ್ಟ್​ ಮೊರೆ ಹೋಗಿದ್ದಾರೆ. ಈಗಾಗಲೇ ತಮ್ಮ ಮಗಳು ಮಗುವೊಂದಕ್ಕೆ ಜನ್ಮ ನೀಡಿದ್ದು, ಆರೋಪಿ ಆಕೆಯನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದರಿಂದ ಜಾಮೀನು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಅಷ್ಟೇ ಅಲ್ಲದೇ, ಲೈಂಗಿಕ ಸಂಬಂಧ ಬೆಳೆಸಲು ಬಾಲಕಿಯ ಒಪ್ಪಿಗೆ ಕೂಡ ಇತ್ತು ಎನ್ನುವುದು ವಿಚಾರಣೆ ವೇಳೆ ಕೋರ್ಟ್​ಗೆ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಗಳಿಗೆ 18 ವರ್ಷ ಆದ ಮೇಲೆ ಮದುವೆಯಾಗಲು ಆತ ಒಪ್ಪಿಕೊಂಡಿದ್ದರಿಂದ ಜಾಮೀನು ನೀಡುವಂತೆ ತಾಯಿ ಕೋರಿದರು.

ಇದನ್ನು ಮಾನ್ಯ ಮಾಡಿದ ಕೋರ್ಟ್​ ಆರೋಪಿಗೆ ಜಾಮೀನು ನೀಡಿದೆ. ಪೋಕ್ಸೋ ಕಾಯ್ದೆ ಅಡಿ 25 ವರ್ಷದ ಆರೋಪಿಯನ್ನು ಬಂಧಿಸಿ ಜೈಲಿನಲ್ಲಿ ಇಡಲಾಗಿತ್ತು.

16 ವರ್ಷದ ಬಾಲಕಿ ತಂದೆಗೆ ಆರೋಪಿ ಪರಿಚಿತನಾಗಿದ್ದ. ಆತನ ಮೊದಲ ಮದುವೆ ವಿಷಯವನ್ನು ಬಾಲಕಿಗೆ ತಿಳಿದಿರಲಿಲ್ಲ. ಆದ್ದರಿಂದ ಇಬ್ಬರೂ ಲೈಂಗಿಕ ಸಂಪರ್ಕ ಬೆಳೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net