'ಮಾಸ್ಕ್​ ಹಾಕೊಳಪ್ಪಾ' ಎಂದಿದ್ದಕ್ಕೆ ಗ್ರಾಪಂ ಪಿಡಿಒ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿ ಈಗ ಪೊಲೀಸರ ಅತಿಥಿ

dharwad
Published on

ಧಾರವಾಡ: ಸೆಮಿ ಲಾಕ್​ಡೌನ್​ ಇದೆ ಕಣ್ರಪ್ಪಾ.. ಮಾಸ್ಕ್​ ಹಾಕೊಳಿ, ಸುರಕ್ಷಿತವಾಗಿರಿ ಎಂದಿದ್ದಕ್ಕೆ ವ್ಯಕ್ತಿಯೊಬ್ಬ ಗ್ರಾಮ ಪಂಚಾಯತಿ ಪಿಡಿಒ ಮೇಲೇ ಹಲ್ಲೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಇದೀಗ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಧಾರವಾಡ ತಾಲೂಕಿನ ಹಳ್ಳಿಗೇರಿ ಗ್ರಾಮದ ನವೀನ ಕೊಟ್ಟಳ್ಳಿ ಬಂಧಿತ ವ್ಯಕ್ತಿ. ಈತ ಕೆಲವು ಸ್ನೇಹಿತರೊಂದಿಗೆ ಗ್ರಾಮದ ಮೈದಾನದಲ್ಲಿ ಬುಧವಾರದಂದು ಕ್ರಿಕೆಟ್ ಆಡುತ್ತಿದ್ದ. ಆ ವೇಳೆಗೆ ಅಲ್ಲಿಗೆ ಬಂದ ಪಿಡಿಒ ಮೃತ್ಯುಂಜಯ ಮೆಣಸಿನಕಾಯಿ, ಅವರಿಗೆ ಬುದ್ಧಿ ಮಾತು ಹೇಳಿದ್ದರು. ಸೆಮಿ ಲಾಕ್​ಡೌನ್​ ಜಾರಿಯಲ್ಲಿದೆ. ಈಗ ಈ ರೀತಿ ಆಟವಾಡಬೇಡಿ, ಮಾಸ್ಕ್​ ಹಾಕಿಕೊಂಡು ಸುರಕ್ಷಿತವಾಗಿರಿ ಎಂದು ಹೇಳಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ನವೀನ್​, ಪಿಡಿಒ ಮೇಲೆ ಹಲ್ಲೆ ಮಾಡಿದ್ದ.


ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ ಹಲ್ಲೆ ಮಾಡಿದ ಅರೋಪದಡಿ ನವೀನನನ್ನು ಬಂಧಿಸಲಾಗಿದೆ. ಧಾರವಾಡ ಗ್ರಾಮೀಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net