

ಬಾಗಲಕೋಟೆ: ಕರೊನಾ ಸೋಂಕಿನಿಂದ ಜೀವ ಉಳಿಸಿಕೊಳ್ಳಲು ಹೋರಾಡುತ್ತಿರುವ ಅನೇಕರಿಗೆ ಅಮೃತದಂತಾಗಿರುವುದು ರೆಮ್ಡೆಸಿವಿರ್ ಔಷಧ. ಆದರೆ ಅದೇ ಔಷಧವನ್ನು ಕದ್ದು ಕಾಳಸಂತೆ ನಡೆಸುತ್ತಿದ್ದ ಆರೋಪಿಗಳಿಗೆ ಜಾಮೀನು ನೀಡಲು ನ್ಯಾಯಾಲಯ ಹಿಂಜರಿದಿದೆ. ಇದು ಗಂಭೀರ ಆರೋಪ ಎಂದು ನ್ಯಾಯಾಲಯ ತಿಳಿಸಿದೆ.
ಮೇ 3ರಂದು ಬಾಗಲಕೋಟೆಯಲ್ಲಿ ಸಿಇಎನ್ ಪೊಲೀಸರು ದಾಳಿ ನಡೆಸಿ 11 ಮಂದಿ ರೆಮ್ಡೆಸಿವಿರ್ ಕಾಳಸಂತೆಕೋರರನ್ನು ಬಲೆಗೆ ಕೆಡವಿಕೊಂಡಿದ್ದರು. ಆದರೆ ಆ ಆರೋಪಿಗಳು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಜಿಲ್ಲೆಯ ಸಿಜೆಎಂ ನ್ಯಾಯಾಲಯ ಆ ಅರ್ಜಿಗಳನ್ನು ವಜಾಗೊಳಿಸಿದೆ. ಇದು ಗಂಭೀರ ಪ್ರಕರಣ, ಹಾಗಾಗಿ ಜಾಮೀನು ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಈ 11 ಆರೋಪಿಗಳಿಂದ 14 ಇಂಜೆಕ್ಷನ್ ವಶಪಡಿಸಿಕೊಳ್ಳಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ ವಿ. ಈ ತೀರ್ಪನ್ನು ನೀಡಿದ್ದಾರೆ. ಸರ್ಕಾರದ ಪರವಾಗಿ ಎಪಿಪಿ ಮಹೇಶ್ ಪಾಟೀಲ ವಾದ ಮಂಡಿಸಿದ್ದಾರೆ.