ಬೇರೆ ಹೆಸರಿನಲ್ಲಿ ಟ್ವಿಟರ್ ಖಾತೆ ತೆರೆದು ಮೋದಿ ಅವಹೇಳನ ಮಾಡಿದವ ಅರೆಸ್ಟ್

Modi
Published on

ಬೀದರ್: ಬೇರೆ ಹೆಸರಿನಲ್ಲಿ ಟ್ವಿಟರ್ ಖಾತೆ ತೆರೆದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಇತರರ ಬಗ್ಗೆ ಅಶ್ಲೀಲ ಪದ ಬಳಸಿ ಅವಹೇಳನ ಮಾಡಿದ ವ್ಯಕ್ತಿಯನ್ನು ಬಂಧಿಸುವಲ್ಲಿ ಬೀದರ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿದ್ರಿ ರಸ್ತೆಯ ಮಗದುಮ್ಜಿ ಕಾಲನಿಯ ಮುಲ್ತಾನಿಮಿಯಾ ಫಕ್ರುದ್ದೀನ್ (43) ಬಂಧಿತ. ಕಳೆದ ಫೆಬ್ರವರಿ ತಿಂಗಳಲ್ಲಿ ಟ್ವಿಟರ್ನಲ್ಲಿ ಮೋದಿ, ಶಾ ಇತರರ ಬಗ್ಗೆ ಅನೇಕ ನಿಂದನೀಯ ಹಾಗೂ ಸಮಾಜದ ಭಾವನೆಗಳನ್ನು ಕದಡುವಂಥ ಪೋಸ್ಟ್ ಹಂಚಿಕೊಂಡಿದ್ದ. ಕೇಂದ್ರ ಗುಪ್ತದಳ ಮಾಹಿತಿಯಂತೆ ಆಂತರಿಕ ಭದ್ರತಾ ವಿಭಾಗ ಹಾಗೂ ಪೊಲೀಸರು ಈತನ ಟ್ವಿಟರ್ ಖಾತೆ ಮೇಲೆ ನಜರ್ ಇಟ್ಟು ತನಿಖೆ ನಡೆಸಿದಾಗ ಸಿಕ್ಕಿ ಬಿದ್ದು ಜೈಲು ಸೇರಿದ್ದಾನೆ. ಈತ ದಬೀಖ್ ಹೆಸರಿನ ಮೇಲೆ ಟ್ವಿಟರ್ ಖಾತೆ ತೆರೆದು ಅನೇಕ ಪೋಸ್ಟ್ ಹರಿಬಿಟ್ಟಿರುವುದು ಬೆಳಕಿಗೆ ಬಂದಿದೆ.

ಮುಲ್ತಾನಿಯೇ ದಬೀಖ್ ಹೆಸರಿನಲ್ಲಿ ಈ ಎಲ್ಲ ಪೋಸ್ಟ್ ಮಾಡುತ್ತಿರುವುದು ಖಚಿತವಾದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಮಗದುಮ್ಜಿ ಕಾಲನಿಗೆ ತೆರಳಿ ಈತನನ್ನು ವಶಕ್ಕೆ ಪಡೆಯಲಾಗಿದೆ. ಎಸ್ಪಿ ಡಿ.ಎಲ್. ನಾಗೇಶ, ಐಎಸ್ಡಿ ಕಲಬುರಗಿ ಎಸ್ಪಿ ರಂಗರಾಜನ್ ಖುದ್ದು ಈತನನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿ ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ. ಈ ಬಗ್ಗೆ ಸಿಪಿಐ ನೀಡಿದ ದೂರಿನ ಮೇರೆಗೆ ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತನ ಕರೊನಾ ಟೆಸ್ಟ್ ಮಾಡಿದ್ದು, ವರದಿ ಬಂದ ನಂತರ (ಶನಿವಾರ) ಜಿಲ್ಲಾ ಕಾರಾಗೃಹಕ್ಕೆ ಕಳಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮುಲ್ತಾನಿಯು ಇಲ್ಲಿ ಆಟೋ ನಡೆಸುತ್ತಿದ್ದಾನೆ. ಬಿಎಸ್ಸಿ ಓದಿದ್ದು, ಕಂಪ್ಯೂಟರ್, ಮೊಬೈಲ್ ತಂತ್ರಜ್ಞಾನ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿದ್ದಾನೆ. ಹಲವು ತಿಂಗಳಿಂದ ಬಿಜೆಪಿ ನೇತಾರರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಸಹ್ಯ, ನಿಂದನೀಯ, ಬೆದರಿಕೆಯಂಥ ವಿಷಯ ಹಂಚಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ. ಈತ ನಿಷೇಧಿತ ಉಗ್ರ ಸಂಘಟನೆಯೊಂದರ ಪ್ರಭಾವಕ್ಕೆ ಒಳಗಾಗಿ ಅವರ ಜತೆ ಬ್ಲಾಗ್ ಮೂಲಕ ಸಂಪರ್ಕ ಬೆಳೆಸಲು ಸಹ ಯತ್ನಿಸಿದ್ದ. ಆದರೆ ಅದಕ್ಕೆ ಆ ಕಡೆಯಿಂದ ಸ್ಪಂದನೆ ಸಿಕ್ಕಿಲ್ಲ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net