ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಜಿಲ್ಲೆಯ ಅಚ್ಚಕನ್ನಡ ಪ್ರದೇಶಗಳಲ್ಲಿನ ಸ್ಥಳನಾಮ ಮಲೆಯಾಳೀಕರಣದೊಂದಿಗೆ ವಿಕೃತಿ ಪಡೆದುಕೊಳ್ಳಲಾರಂಭಿಸಿದ್ದು, ಜನತೆ ಗೊಂದಲಕ್ಕೀಡಾಗುತ್ತಿದ್ದಾರೆ. ಜಿಲ್ಲಾ ಕೇಂದ್ರ ಕಾಸರಗೋಡಿನ ಹೆಸರನ್ನೇ ವಿಕೃತಿಗೊಳಿಸಿ ‘ಕಾಸರ್‌ಕೋಡ್’ ಎಂದು ಬರೆಯಲಾಗುತ್ತಿದೆ!
ಇನ್ನು ಕಾಸರಗೋಡು ಜಿಲ್ಲೆಯ ಬೇಡಡ್ಕವನ್ನು ಬೇಡಗಂ, ಬದಿಯಡ್ಕ ಸನಿಹದ ಚೇಡಿಕಾನವನ್ನು ಚೆಡೇಕ್ಕಲ್, ಮಾಯಿಪ್ಪಾಡಿ ಸನಿಹದ ಪುಳ್ಕೂರು ಸ್ಥಳನಾಮವನ್ನು ‘ಪುಳಿಕ್ಕೂರ್’, ಕಾಸರಗೋಡಿನ ಆನೆಬಾಗಿಲನ್ನು ಆನವಾದುಕ್ಕಲ್, ಪ್ರಸಿದ್ಧ ಸರೋವರ ಕ್ಷೇತ್ರ ಅನಂತಪುರವನ್ನು ಆನಂದಪುರ, ಕುಂಬಳೆಯನ್ನು ಕುಂಬಳಂ ಹೀಗೆ ಸ್ಥಳನಾಮವನ್ನು ವ್ಯಾಪಕವಾಗಿ ಮಲೆಯಾಳೀಕರಣಗೊಳಿಸಲಾಗುತ್ತಿದೆ. ಸ್ಥಳನಾಮ ವಿಕೃತಿಗೊಳಿಸುವ ಮೂಲಕ ಅಚ್ಚಕನ್ನಡ ಪ್ರದೇಶವಾಗಿರುವ ಕಾಸರಗೋಡನ್ನು ಹಂತ ಹಂತವಾಗಿ ಮಲೆಯಾಳೀಕರಣಗೊಳಿಸುವ ಹುನ್ನಾರ ನಡೆದು ಬರುತ್ತಿರುವುದಾಗಿ ಕನ್ನಡಪರ ಹೋರಾಟಗಾರರು ಆರೋಪಿಸಿದ್ದಾರೆ.
ಕನ್ನಡಿಗರೂ ಜವಾಬ್ದಾರರು: ಕನ್ನಡ ಪ್ರದೇಶದ ಹೆಸರನ್ನು ಮಲೆಯಾಳೀಕರಣಗೊಳಿಸುತ್ತಿರುವುದರ ವಿರುದ್ಧ ಪ್ರಬಲ ಹೋರಾಟದ ಕೊರತೆಯಿಂದ ಜಿಲ್ಲೆಯ ಬಹುತೇಕ ಕನ್ನಡ ನಾಮಾಂಕಿತ ಪ್ರದೇಶ ಇಂದು ವಿಕೃತಿಗೊಳಗಾಗುತ್ತಿದೆ. ಗಡಿನಾಡು ಕಾಸರಗೋಡಿನ ಕನ್ನಡಿಗರು ಹೊಂದಿರುವ ಸಂವಿಧಾನಾತ್ಮಕ ಹಕ್ಕುಗಳ ಬಗ್ಗೆ ಅರಿವಿನ ಕೊರತೆಯಿಂದ ಬಹುತೇಕ ಕನ್ನಡಿಗರು ಮಲೆಯಾಳಿ ಅಧಿಕಾರಿಗಳ ತಾಳಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ. ಮಲೆಯಾಳದ ಅರಿವಿಲ್ಲದಿದ್ದರೂ ಕನ್ನಡಿಗರು ಅರ್ಜಿ ನಮೂನೆ ಇನ್ನೊಬ್ಬರ ಸಹಾಯದಿಂದ ಮಲೆಯಾಳದಲ್ಲೇ ಬರೆದು ನೀಡುವ ಮೂಲಕ ತಮ್ಮ ಔದಾರ್ಯ ಮೆರೆಯುತ್ತಿದ್ದಾರೆ. ಜಿಲ್ಲೆಯ ನಾನಾ ಇಲಾಖೆಗಳಿಗೆ ಕನ್ನಡದಲ್ಲಿ ಸಲ್ಲಿಕೆಯಾಗುತ್ತಿರುವ ಅರ್ಜಿ ನಮೂನೆಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಇಲ್ಲಿ ಕನ್ನಡಿಗರ ಸಂಖ್ಯೆ ಕ್ಷೀಣಿಸುತ್ತಿರುವುದಾಗಿ ಸ್ವತಃ ಅಧಿಕಾರಿಗಳೇ ಸರ್ಕಾರಕ್ಕೆ ವರದಿ ಸಲ್ಲಿಸುತ್ತಿದ್ದಾರೆ! ಪ್ರತಿ ಇಲಾಖೆಗೆ ಕನ್ನಡದಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆ ಹೆಚ್ಚಾದಂತೆ ಅನಿವಾರ್ಯವಾಗಿ ಅಲ್ಲಿ ಕನ್ನಡಿಗರ ಬೇಡಿಕೆಗೂ ಬೆಲೆ ಬರಲು ಸಾಧ್ಯ ಎಂಬುದಾಗಿ ಕನ್ನಡ ಹೋರಾಟಗಾರರೊಬ್ಬರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕನ್ನಡದ ಸ್ಥಳ ನಾಮಗಳನ್ನು ಮಲೆಯಾಳೀಕರಣಗೊಳಿಸುತ್ತಿರುವ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಪ್ರಾಧಿಕಾರ ಐದು ಮಂದಿ ಸದಸ್ಯರ ತಜ್ಞ ಸಮಿತಿಯನ್ನು ನಿಯೋಜಿಸಿದೆ. ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಆದೇಶ ನೀಡಲಾಗಿದೆ. ಕಾಸರಗೋಡು ಸರ್ಕಾರಿ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್, ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಕೆ.ಶಶಿಧರ ಶೆಟ್ಟಿ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ರವಿ ನಾಯ್ಕಪು, ಕಾಸರಗೋಡು ಸರ್ಕಾರಿ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ, ಕವಿ ಸುಂದರ ಬಾರಡ್ಕ ಅವರನ್ನು ಸಮಿತಿ ಸದಸ್ಯರನ್ನಾಗಿ ನಿಯೋಜಿಸಿ ಆದೇಶ ಹೊರಡಿಸಲಾಗಿದೆ. ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ, ಕನ್ನಡ ಸಂಘಟಕ ಎ.ಆರ್.ಸುಬ್ಬಯ್ಯಕಟ್ಟೆ ಅವರ ಮನವಿ ಮೇರೆಗೆ ಸಮಿತಿ ಘೋಷಿಸಲಾಗಿದ್ದು, ಸಮಿತಿ ಚಟುವಟಿಕೆಗಳ ಮೇಲ್ನೋಟವನ್ನು ಎ.ಆರ್.ಸುಬ್ಬಯ್ಯಕಟ್ಟೆ ವಹಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಹಲವು ವರ್ಷಗಳಿಂದ ಸ್ಥಳನಾಮ ವಿಕೃತಿಗೊಳಿಸುವ/ ಮಲೆಯಾಳೀಕರಣದ ಬಗ್ಗೆ ದೂರು ಲಭಿಸುತ್ತಾ ಬಂದಿದ್ದು, ಈ ವಿಷಯವನ್ನು ನಾಲ್ಕು ತಿಂಗಳ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆ ಮುಂದಿಡಲಾಗಿತ್ತು. ಗಡಿನಾಡು ಕಾಸರಗೋಡಿನ ಕನ್ನಡಿಗರ ಸಮಸ್ಯೆ ಬಗ್ಗೆ ಸದಾ ಸ್ಪಂದಿಸುತ್ತಿರುವ ಪ್ರಾಧಿಕಾರದ ಅಧ್ಯಕ್ಷರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸ್ಥಳನಾಮ ಮಲೆಯಾಳೀಕರಣದ ಬಗ್ಗೆ ಸಮಗ್ರ ಅಧ್ಯಯನಕ್ಕೆ ಸಮಿತಿ ರಚಿಸಲು ಮುಂದಾಗಿದ್ದಾರೆ. ಗಡಿನಾಡ ಕನ್ನಡಿಗರು ಎದುರಿಸುತ್ತಿರುವ ಇನ್ನೂ ಹಲವು ಸಮಸ್ಯೆಗಳನ್ನು ಪ್ರಾಧಿಕಾರದ ಗಮನಕ್ಕೆ ತರಲಾಗಿದ್ದು, ಹಂತ ಹಂತವಾಗಿ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ. ಎ.ಆರ್.ಸುಬ್ಬಯ್ಯಕಟ್ಟೆ, ಸದಸ್ಯರು, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು
ಸಮಗ್ರ ಅಧ್ಯಯನಕ್ಕೆ ಸಮಿತಿ
ಜಿಲ್ಲೆಯ ಕನ್ನಡ ನಾಮಾಂಕಿತ ಪ್ರದೇಶ, ಗ್ರಾಮ, ಸ್ಥಳ ನಾಮಗಳನ್ನು ನಿರಂತರವಾಗಿ ಮಲೆಯಾಳೀಕರಣ ನಡೆಸುತ್ತಿರುವ ಗಂಭೀರ ಸಮಸ್ಯೆ ಬಗ್ಗೆ ಅಧ್ಯಯನ ನಡೆಸಿ ಸೂಕ್ತ ಪರಿಹಾರ ಕಲ್ಪಿಸಲು ಕರ್ನಾಟಕ ರಾಜ್ಯ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.