ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಜಿಲ್ಲೆಯಲ್ಲಿ ಮಳೆಗಾಲದ ಸಿದ್ಧತೆ ಕುರಿತು ಇಲಾಖಾ ಮುಖ್ಯಸ್ಥರು, ಪಂಚಾಯಿತಿ, ನಗರಸಭೆ ಕಾರ್ಯದರ್ಶಿಗಳ ಸಭೆ ನಡೆಯಿತು. ಎಡಿಎಂ ಪಿ.ಅಖಿಲ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಹೆದ್ದಾರಿಗಳಿಗೆ ಎಲ್.ಎ.ಎನ್.ಎಚ್. ಉಪ ಕಲೆಕ್ಟರನ್ನು ನೇಮಕಗೊಳಿಸಲಾಯಿತು.
ರಸ್ತೆ ಬದಿ ಅಪಾಯದಲ್ಲಿರುವ ಮರಗಳನ್ನು ಕತ್ತರಿಸುವಲ್ಲಿ, ತುರ್ತು ಸಂದರ್ಭಗಳಲ್ಲಿ ಮರದ ಕೊಂಬೆ ಕಡಿಯುವಲ್ಲಿ ಸ್ಥಳೀಯಾಡಳಿತ ಸಂಸ್ಥೆ ಮುಂದಾಳತ್ವ ವಹಿಸಬೇಕು. ಶಾಲೆಗಳು ತೆರೆಯುವ ಮೊದಲು ಸುರಕ್ಷತಾ ಲೆಕ್ಕಪರಿಶೋಧನೆ ಪೂರ್ಣಗೊಳಿಸಬೇಕು. ಆವರಣವನ್ನು ಸ್ವಚ್ಛಗೊಳಿಸಬೇಕೆಂದು ಎಡಿಎಂ ಹೇಳಿದರು.
ಮೀನುಗಾರಿಕೆ ಇಲಾಖೆ ಪ್ರತಿನಿಧಿಯೊಬ್ಬರು ಮಾತನಾಡಿ, ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದ್ದು, ರಕ್ಷಣಾ ದೋಣಿಗಳಿಗೆ ಬೆಲೆ ನಿಗದಿ ಮಾಡಲಾಗಿದೆ ಎಂದರು.
ಜಿಲ್ಲೆಯ ಎಲ್ಲ ಅಂಗನವಾಡಿಗಳಲ್ಲಿ ಮಳೆಗಾಲ ಪೂರ್ವ ಶುಚಿಗೊಳಿಸುವಿಕೆ, ಮಳೆಗಾಲದ ಸಿದ್ಧತೆಗಳಿಗಾಗಿ ಸೂಚನೆ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ತುರ್ತು ಸಂದರ್ಭ ಶಿಬಿರಗಳನ್ನು ತೆರೆಯಲು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಟ್ಟಡಗಳನ್ನು ಗುರುತಿಸಲಾಗಿದ್ದು, 24 ಗಂಟೆಗಳ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸುತ್ತಿದೆ. ವಿಪತ್ತು ನಿರ್ವಹಣಾ ಚಟುವಟಿಕೆಗಳಿಗೆ ಅಗತ್ಯವಿರುವ ವ್ಯವಸ್ಥೆಗಳ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ತಹಸೀಲ್ದಾರ್ ಮಾಹಿತಿ ನೀಡಿದರು.
ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕ ಜಿ.ಸುಧಾಕರನ್, ಆರ್‌ಡಿಒ ಪಿ.ಬಿನುಮೋನ್, ಅಪರ ಜಿಲ್ಲಾಧಿಕಾರಿ ಎಲ್.ಎ.ಎಂ.ರಮೀಸ್ ರಾಜಾ, ಪ್ರಮುಖ ನೀರಾವರಿ ಇಇ ಪಿ.ಟಿ.ಸಂಜೀವ್, ಪ್ರವಾಸೋದ್ಯಮ ಡಿಡಿ ಜಿ.ಶ್ರೀಕುಮಾರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ರಾಜ್, ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಕೆ.ವಿ.ರವಿರಾಜ್, ಮಹಿಳಾ ರಕ್ಷಣಾಧಿಕಾರಿ ಪಿ.ಜ್ಯೋತಿ, ಡಿವೈಎಸ್ಪಿ ವಿಶೇಷ ಶಾಖೆಯ ಎಂ.ಸುನೀಲ್ ಕುಮಾರ್, ಭೂವಿಜ್ಞಾನಿ ಡಾ.ಸೂರಜ್, ತಹಸೀಲ್ದಾರರಾದ ಪಿ.ವಿ.ಮುರಳಿ, ಎಂ.ಶ್ರೀನಿವಾಸ್, ಟಿ.ಜಯಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.
ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ವಿಪತ್ತು ಪೀಡಿತ ಪ್ರದೇಶಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಆರೆಂಜ್ ಬುಕ್ ಮಾರ್ಗಸೂಚಿಗಳ ಪ್ರಕಾರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕನಿಷ್ಠ ಎರಡು ವಾರ್ಡ್‌ಗಳಿಗೆ ಒಂದರಂತೆ ಶಿಬಿರ ಆಯೋಜಿಸಲಾಗುವುದು. ಪ್ರತಿ ಹತ್ತು ಮನೆಗಳಿಗೆ ಒಬ್ಬ ಸ್ವಯಂಸೇವಕರನ್ನು ನಿಯೋಜಿಸಲಾಗುವುದು. ವಿಪತ್ತುಗಳಿಂದ ಹೆಚ್ಚು ಪರಿಣಾಮ ಬೀರುವ ವರ್ಗಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಮಳೆಗಾಲ ಪೂರ್ವ ಶುಚಿಗೊಳಿಸುವಿಕೆ ಭಾಗವಾಗಿ, ಎಂಸಿಎಫ್‌ಗಳಿಂದ ಅಜೈವಿಕ ತ್ಯಾಜ್ಯ ವಿಲೇವಾರಿಗೊಳಿಸಲಾಗುವುದು. ಹಸಿರು ಕ್ರಿಯಾ ಸೇನೆ ತ್ಯಾಜ್ಯ ವಿಲೇವಾರಿಗೆ ಸಿದ್ಧವಾಗಿದೆ. ಸೇತುವೆ, ಕಿರು ಸೇತುವೆಗಳಿಗಿರುವ ತಡೆಗಳನ್ನು ವಿಲೇವಾರಿಗೊಳಿಸಿ ನೀರಿನ ಹರಿವು ಸುಗಮಗೊಳಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಜಿ.ಸುಧಾಕರನ್ ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕ
ಆ್ಯಂಟಿ ಮೈಕ್ರೋಬಿಯಲ್ ಪ್ರತಿರೋಧದ ತಿಳಿವಳಿಕೆ: ಡಾ.ಎಚ್.ಬಿ.ಪ್ರಕಾಶ್ ಸಲಹೆ
ಯೋಧರ ಸುರಕ್ಷೆಗಾಗಿ ದರ್ಗಾದಲ್ಲಿ ಪ್ರಾರ್ಥನೆ : ಮದನಿ ಅರೆಬಿಕ್ ಕಾಲೇಜು ಪ್ರೊಫೆಸರ್ ನೌಮಾನ್ ನೂರಾನಿ ಹೇಳಿಕೆ