

ಗುರುಪುರ: ಗಂಜಿಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳಲಿ ದೇವರಗುಡ್ಡೆಯ ಶ್ರೀ ಸೂರ್ಯನಾರಾಯಣ ಹಾಗೂ ಪರಿವಾರ ದೇವರ ಗರ್ಭಗುಡಿ ನಿರ್ಮಾಣ ಹಿನ್ನೆಲೆಯಲ್ಲಿ ಇಂದು(ಜು. 12) ವೇ.ಮೂ.ಪೊಳಲಿ ಸುಬ್ರಹ್ಮಣ್ಯ ತಂತ್ರಿ ಅವರ ಮುಂದಾಳತ್ವದಲ್ಲಿ ಗಣಪತಿ ಹೋಮ, ಪ್ರಾರ್ಥನೆ ಪುಣ್ಯಾಹ ಹಾಗೂ ಭೂಕರ್ಷಣಾದಿಯಾಗಿ ಭೂಮಿ ಉಳುಮೆ ಮಾಡಿ ಧಾನ್ಯ ಬಿತ್ತನೆ ವಿಧಿವಿಧಾನ ನೆರವೇರಲಿದೆ.
ಈಗಾಗಲೇ ದೇವಸ್ಥಾನದ ವಠಾರ ಸಮತಟ್ಟುಗೊಳಿಸಲಾಗಿದ್ದು, ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ದೇವಸ್ಥಾನಕ್ಕೆ ಸಂಬಂಧಿಸಿ ಪುರಾತನ ಕೆರೆ ಶೋಧನೆ ಮಾಡಲಾಗಿದೆ. ದೇವರ ಗದ್ದೆಯಲ್ಲಿ ಹೆಸರು, ಎಳ್ಳು, ಹುರುಳಿ, ಹಾಗೂ ಸಾಸಿವೆ ಬಿತ್ತಲಾಗುತ್ತದೆ. ಫಸಲಿನಿಂದ ಗೋವುಗಳಿಗೆ ಗೋಗ್ರಾಸ, ಧಾನ್ಯಗಳಿಂದ ದೇವರಿಗೆ ನೈವೇದ್ಯ ಅರ್ಪಿಸಲಾಗುತ್ತದೆ.
13ನೇ ಶತಮಾನದ ಅಳುಪ ರಾಜವಂಶದ ದೊರೆ ರಾಜ ಕುಲಶೇಖರ ಈ ಪ್ರದೇಶದಲ್ಲಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ನಿರ್ಮಿಸಿದ್ದ ಎಂಬ ಪ್ರತೀತಿ ಇದೆ. ಕಾಲಕ್ರಮೇಣ, ಸುಮಾರು 300ರಿಂದ 400 ವರ್ಷಗಳ ಹಿಂದೆ ಈ ದೇವಸ್ಥಾನ ನೆಲಸಮ ಆಗಿರಬೇಕೆಂದು ಅಂದಾಜಿಸಲಾಗಿದೆ. ಪ್ರಶ್ನೆ ಚಿಂತನೆಯ ಬಳಿಕ ಇಲ್ಲಿ ದೇವಸ್ಥಾನ ಪುನರ್ ನಿರ್ಮಾಣ ಪ್ರಯತ್ನ ಮುಂದುವರಿದಿದೆ.