ಮಳಲಿ ಅಣೆಕಟ್ಟಿಗೆ ಬೇಕಿದೆ ರಸ್ತೆ!: ಗಂಜಿಮಠ-ಪೊಳಲಿ-ಬಿ.ಸಿ.ರೋಡ್ ಸಂಪರ್ಕಕ್ಕೆ ಸುಲಭ : ನಾಗರಿಕರಿಂದ ಆಗ್ರಹ ವ್ಯಕ್ತ

Published on

ಧನಂಜಯ ಗುರುಪುರ

ಗುರುಪುರ: ಗಂಜಿಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಗುಳಿಪಾಡಿ, ತೆಂಕುಳಿಪಾಡಿ, ಮೊಗರು ಮತ್ತು ಮುತ್ತೂರು ಪಂಚಾಯಿತಿ ವ್ಯಾಪ್ತಿಯ ಕುಲವೂರು ಗ್ರಾಮದ ಕೃಷಿಕರಿಗೆ ಅನುಕೂಲವಾಗುವಂತೆ ನಿರ್ಮಿಸಲಾದ ಮಳಲಿ(ಮಣೇಲ್) ಕಿಂಡಿ ಅಣೆಕಟ್ಟಿನ(ವೆಂಟೆಡ್ ಡ್ಯಾಮ್) ಕಿರುರಸ್ತೆಯ ಎರಡೂ ಪಾರ್ಶ್ವಗಳಲ್ಲಿ ರಸ್ತೆ ಸಂಪರ್ಕ ಕಲ್ಪಿಸುವಂತೆ ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.

ಅಂತರ್ಜಲ ವೃದ್ಧಿಯೊಂದಿಗೆ ಸುತ್ತಲ ಪ್ರದೇಶದ ಕೃಷಿಕರಿಗೆ ಅನುಕೂಲವಾಗುವಂತೆ ಫಲ್ಗುಣಿ ನದಿಗೆ ಅಡ್ಡಲಾಗಿ 4 ವರ್ಷಗಳ ಹಿಂದೆ ತೆಂಕುಳಿಪಾಡಿ ಗ್ರಾಮದ ಮಳಲಿಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಹೊಸತಾಗಿ ನಿರ್ಮಿಸಲಾದ ಈ ಅಣೆಕಟ್ಟು ಇನ್ನೂ ಲೋಕಾರ್ಪಣೆಗೊಳ್ಳದಿದ್ದರೂ ನಾಗರಿಕರು ಮಾತ್ರ ಪೂರ್ಣ ಪ್ರಮಾಣದಲ್ಲಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಅಣೆಕಟ್ಟಿನಲ್ಲಿ ಸುಮಾರು 14 ಅಡಿ ಅಗಲದ ರಸ್ತೆ ನಿರ್ಮಿಸಲಾಗಿದೆ.

ಇಚ್ಛಾಶಕ್ತಿ ವ್ಯಕ್ತಪಡಿಸದ ಜನಪ್ರತಿನಿಧಿಗಳು

ಯೋಜನೆಯ ಆರಂಭದಲ್ಲಿ ಪ್ರಕಟಿಸಲಾದಂತೆ ಮಳಲಿ ಅಮ್ಚೆದಬಾಗಿಲಿನಿಂದ ಅಣೆಕಟ್ಟಿನ ವರೆಗೆ ಸುಮಾರು ಅರ್ಧ ಕಿ.ಮೀ. ಅಂತರದಲ್ಲಿ ಸ್ಥಳೀಯ ಕೃಷಿಕರು ಬಿಟ್ಟುಕೊಟ್ಟಿರುವ ಜಾಗದಲ್ಲಿ ಕಚ್ಛಾ ರಸ್ತೆ ನಿರ್ಮಾಣಗೊಂಡಿದ್ದರೂ, ಈವರೆಗೆ ಇದರ ಸೂಕ್ತ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಅಣೆಕಟ್ಟಿನ ಮತ್ತೊಂದು ಪಾರ್ಶ್ವದಲ್ಲಿ ಪೊಳಲಿ ಮತ್ತು ಪುಂಚಮೆಯಾಗಿ ಬಿ.ಸಿ.ರೋಡ್ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಿಸಲು ಅವಕಾಶವಿದ್ದು, ಅಣೆಕಟ್ಟಿನಿಂದ ಸುಮಾರು 500 ಮೀಟರ್ ರಸ್ತೆ ನಿರ್ಮಾಣದ ಅಗತ್ಯವಿದೆ. ಪೊಳಲಿಗೆ ಸಂಪರ್ಕ ಕಲ್ಪಿಸಬಹುದಾದ ರಸ್ತೆ ನಿರ್ಮಿಸಲು ಆ ಭಾಗದ ಭೂಮಾಲೀಕರು ಸಮ್ಮತಿಸಿದ್ದಾರೆ. ಇಷ್ಟಿದ್ದರೂ ಇಲ್ಲಿಗೆ ಸಂಬಂಧಿಸಿದ ಜನಪ್ರತಿನಿಧಿಗಳು ಮಾತ್ರ ತಮ್ಮ ಇಚ್ಛಾಶಕ್ತಿ ವ್ಯಕ್ತಪಡಿಸಿಲ್ಲ ಎಂಬುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.

ಪೊಳಲಿ-ಮಳಲಿ ನಿಕಟತೆ

ಪೊಳಲಿ - ಮೈಯರಕೂಟೇಲು - ಕಡಪುಕರಿಯ ಮೂಲಕ ತೆಂಕುಳಿಪಾಡಿ ಗ್ರಾಮದ ಮಳಲಿಯ ಉಳಿಪಾಡಿಗುತ್ತಿನ ಮನೆಗೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಿಂದ ವರ್ಷಕ್ಕೆ 5 ಬಾರಿ ಭಂಡಾರ ಬರುವ ಸಂಪ್ರದಾಯವಿದೆ. ಜತೆಗೆ ಪೊಳಲಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಕೊನೆಯ ದಿನದಂದು ಅವಭೃತ ಸ್ನಾನ ನಡೆಯುವುದು ಮಳಲಿಯ ಫಲ್ಗುಣಿ ನದಿ ತಟದಲ್ಲೇ. ಆದರೆ ಪೊಳಲಿಯಿಂದ ಕಡಪುಕರಿಯದ ವರೆಗೆ ದೇವರ ಮೆರವಣಿಗೆಯು ಸವೆದು ಹೋಗಿರುವ ನದಿ ತಟದಲ್ಲಿ, ಪೊದೆ-ಗಿಡಗಂಟಿ ಸೀಳಿಕೊಂಡು ಮುಂದೆ ಸಾಗಬೇಕಾಗಿದೆ. ಹಾಗಾಗಿ ಧಾರ್ಮಿಕವಾಗಿ ಮಹತ್ವ ಪಡೆದಿರುವ ಮಳಲಿಗೆ ಅಣೆಕಟ್ಟು ಸಂಪರ್ಕಿಸುವ ಕಡಪುಕರಿಯದಲ್ಲಿ ಕಿರು ರಸ್ತೆ ನಿರ್ಮಿಸುವ ಅಗತ್ಯವಿದೆ.

ಕಿಂಡಿ ಅಣೆಕಟ್ಟಿಗೆ ಸಂಪರ್ಕ ಕಲ್ಪಿಸುವ ಕಚ್ಛಾ ರಸ್ತೆ ಕೆಸರುಮಯವಾಗಿರುವುದು.
ಕಿಂಡಿ ಅಣೆಕಟ್ಟಿಗೆ ಸಂಪರ್ಕ ಕಲ್ಪಿಸುವ ಕಚ್ಛಾ ರಸ್ತೆ ಕೆಸರುಮಯವಾಗಿರುವುದು.

ಮರಳುಗಾರಿಕೆಗೆ ನಿರ್ಬಂಧ

ಜಿಲ್ಲೆಯಲ್ಲಿ ಸೇತುವೆಗಳಿಗೆ ಹತ್ತಿರದಲ್ಲೇ ಮರಳುಗಾರಿಕೆ ನಡೆಯುತ್ತಿರುವುದರಿಂದ ಅಡ್ಡೂರು ಸಹಿತ ಕೆಲವು ಹಳೇ ಸೇತುವೆಗಳು ಶಿಥಿಲಗೊಂಡಿವೆ ಎಂಬ ಆರೋಪ ಕೇಳಿ ಬರುತ್ತಿರುವುದರ ಜತೆಗೆ ಹೊಸ ಸೇತುವೆ ನಿರ್ಮಾಣದ ಅಗತ್ಯ ಕಂಡು ಬಂದಿದೆ. ಈ ದೃಷ್ಟಿಯಿಂದ 4 ವರ್ಷದ ಹಿಂದೆ ನಿರ್ಮಿಸಲಾದ ಮಳಲಿ ಕಿಂಡಿ ಅಣೆಕಟ್ಟಿನ ಹತ್ತಿರದಲ್ಲಿ ಮರಳುಗಾರಿಕೆ ನಡೆಸದಂತೆ ಜಿಲ್ಲಾಡಳಿತವು ಸಣ್ಣ ನೀರಾವರಿ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವ ಅಗತ್ಯವಿದೆ. ಇಲ್ಲವಾದಲ್ಲಿ ಕಿರು ರಸ್ತೆ ಒಳಗೊಂಡಿರುವ ಮಳಲಿ ಕಿಂಡಿ ಅಣೆಕಟ್ಟಿನ ಬಾಳಿಕೆ ಕ್ಷೀಣಿಸಬಹುದು ಎಂಬುದು ಸ್ಥಳೀಯ ನಾಗರಿಕರ ಅಭಿಮತ.

ರಮಾನಾಥ ರೈ ಸಚಿವರಾಗಿದ್ದ 2018 ಏಪ್ರಿಲ್‌ನಲ್ಲಿ ಮಳಲಿ ಕಿಂಡಿ ಅಣೆಕಟ್ಟಿಗೆ ಶಿಲಾನ್ಯಾಸ ನಡೆದಿತ್ತು. ಅಣೆಕಟ್ಟು ರಸ್ತೆಯಲ್ಲಿ ಸಾಮಾನ್ಯ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಬಹುದು. ಒಂದೊಮ್ಮೆ ಬಸ್ ಸಂಚರಿಸಿದರೆ, ಪ್ರಸಕ್ತ ಬಿ.ಸಿ.ರೋಡ್ ಸಂಪರ್ಕದ ಅಡ್ಡೂರು ಸೇತುವೆ ರಸ್ತೆ ಸಂಚಾರದ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡಿದಂತಾಗುತ್ತದೆ. ಮಳಲಿಯ ಅಮ್ಚೆದಬಾಗಿಲಿನಿಂದ ಅಣೆಕಟ್ಟಿನ ವರೆಗೆ ಕಚ್ಚಾ ರಸ್ತೆ ಇದೆ. ಇದರ ಅಭಿವೃದ್ಧಿಯೊಂದಿಗೆ ಮತ್ತೊಂದು ಪಾರ್ಶ್ವದಲ್ಲಿ ಕರಿಯಂಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಪುಕರಿಯದಲ್ಲಿ ಕಿರು ಅಂತರದ ರಸ್ತೆ ನಿರ್ಮಿಸಿದರೆ ಪೊಳಲಿಗೆ ನೇರ ಸಂಪರ್ಕ ಕಲ್ಪಿಸಬಹುದು. ಎರಡೂ ಭಾಗದ ನಾಗರಿಕರು ಜನಪ್ರತಿನಿಧಿಗಳಿಗೆ ಮನವಿ ಮೂಲಕ ವಿಷಯ ಗಮನಕ್ಕೆ ತಂದರೂ, ಈ ವರೆಗೆ ಯಾವುದೇ ಪ್ರಯೋಜನವಾಗಿಲ್ಲ. - ಪುರಂದರ ಕುಲಾಲ್ ಮಳಲಿ, ಸ್ಥಳೀಯ ನಿವಾಸಿ.

ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಅಣೆಕಟ್ಟಿನಲ್ಲಿ ಕಿರು ರಸ್ತೆ ನಿರ್ಮಿಸಲಾಗಿದೆ. ಈ ಮೂಲಕ ಸುತ್ತಲ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಎರಡೂ ಪಾರ್ಶ್ವದಲ್ಲಿ ರಸ್ತೆ ನಿರ್ಮಾಣಗೊಳ್ಳಲಿದೆ ಎಂದು ಹೇಳಲಾಗಿತ್ತಾದರೂ ಈ ವರೆಗೆ ಮತ್ತೊಂದು ಪಾರ್ಶ್ವದಲ್ಲಿ (ಕಡಪುಕರಿಯ) ರಸ್ತೆ ನಿರ್ಮಿಸಿಲ್ಲ. ಮಳಲಿ ಭಾಗದಲ್ಲಿ ರಸ್ತೆ ನಿರ್ಮಾಣಗೊಂಡಿದೆ. ಅಣೆಕಟ್ಟಿನ ರಸ್ತೆಗೆ ಎರಡೂ ಪಾರ್ಶ್ವದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಗೊಂಡರೆ ಗಂಜಿಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಂಕುಳಿಪಾಡಿ, ಬಡಗುಳಿಪಾಡಿ, ಮೊಗರು, ಮುತ್ತೂರು ಪಂಚಾಯಿತಿ ವ್ಯಾಪ್ತಿಯ ಕುಲವೂರು ಹಾಗೂ ಕರಿಯಂಗಳ, ಬಡಗಬೆಳ್ಳೂರು, ಗುರುಪುರ ಗ್ರಾಮ ಪಂಚಾಯಿತಿಯ ಕೆಲವು ಗ್ರಾಮಗಳ ಸಾವಿರಾರು ಜನರಿಗೆ ಅನುಕೂಲವಾಗಲಿದೆ. - ಯಶವಂತ ಕುರೆಮಾರ್, ಅಮ್ಚೆದಬಾಗಿಲು ಕೃಷಿಕ.

ಜನತೆಯ ಅನುಕೂಲಕ್ಕಾಗಿ ಕಿಂಡಿ ಅಣೆಕಟ್ಟಿನ ಅಂಚಿನಲ್ಲಿ ನಿರ್ಮಿಸಲಾದ ಸುಸಜ್ಜಿತ ಕಾಂಕ್ರಿಟ್ ರಸ್ತೆ.
ಜನತೆಯ ಅನುಕೂಲಕ್ಕಾಗಿ ಕಿಂಡಿ ಅಣೆಕಟ್ಟಿನ ಅಂಚಿನಲ್ಲಿ ನಿರ್ಮಿಸಲಾದ ಸುಸಜ್ಜಿತ ಕಾಂಕ್ರಿಟ್ ರಸ್ತೆ.

ಮಳಲಿ ಪೇಟೆಯಿಂದ ಅಣೆಕಟ್ಟಿನವರೆಗೆ ನಿರ್ಮಿಸಲಾದ ‘ಮಣೇಲ್ ರಾಣಿ ಅಬ್ಬಕ್ಕ ರಸ್ತೆ’ ಕಚ್ಛಾ ರಸ್ತೆ ಎತ್ತರಿಸಿ, ಕಾಂಕ್ರಿಟ್ ರಸ್ತೆಯಾಗಿ ಅಭಿವೃದ್ಧಿಗೊಳಿಸಿದಲ್ಲಿ ಇದು ಈ ಭಾಗದಲ್ಲಿ ಸಾವಿರಾರು ಮಂದಿಯ ಸಂಚಾರಕ್ಕೆ ಪ್ರಮುಖ ರಸ್ತೆಯಾಗಲಿದೆ. ಗಂಜಿಮಠ ಮತ್ತು ಮಳಲಿ ಕಡೆಯಿಂದ ಪೊಳಲಿ ಮೂಲಕ ಬಿ.ಸಿ.ರೋಡಿನತ್ತ ಪ್ರಯಾಣಿಸುವವರಿಗೆ ಸಮಯದ ಉಳಿತಾಯವಾಗಲಿದೆ. ಆದರೆ ಅಣೆಕಟ್ಟಿನ ಮತ್ತೊಂದು ಪಾರ್ಶ್ವದ ಕರಿಯಂಗಳ ಪಂಚಾಯಿತಿ ವ್ಯಾಪ್ತಿಯ ಕಡಪುಕರಿಯದ ಜನರು ಇದಕ್ಕೆ ಸ್ಪಂದಿಸುವ ಅಗತ್ಯವಿದೆ. - ಶೇಖಬ್ಬ ಎಂ., ಮಳಲಿ ಹೊಳೆಬದಿ ನಿವಾಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net