

ಕಾಸರಗೋಡು: ಇತರ ಭಾಷೆಗಳಲ್ಲಿರುವ ಸಾಹಿತ್ಯ ಕೃತಿಗಳು ಭಾಷಾಂತರಗೊಂಡು ಬರುವುದರಿಂದ ಸಾಹಿತ್ಯದ ಬೆಳವಣಿಗೆಗೆ ಸಹಾಯಕವಾಗುವುದಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ಆಯಿಷಾ ಪೆರ್ಲ ಹೇಳಿದರು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ, ಅನುವಾದಕಿ ಡಾ.ಪಾರ್ವತಿ ಐತಾಳ್ ಮಲಯಾಳಕ್ಕೆ ಅನುವಾದಿಸಿದ ‘ಭ್ರಾಂತಾಲಯಂ’ ನಾಟಕ ಕೃತಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರಾಂಶುಪಾಲ ಮಹಮ್ಮದಾಲಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಲಯಾಳದಿಂದ ಕನ್ನಡಕ್ಕೆ ಹಲವು ಕೃತಿಗಳು ಭಾಷಾಂತರಗೊಂಡಿದ್ದರೂ ಕನ್ನಡದಿಂದ ಮಲಯಾಳಕ್ಕೆ ತರ್ಜುಮೆಯಾದ ಕೃತಿಗಳು ಕಡಿಮೆ. ಈ ದಿಶೆಯಲ್ಲಿ ಡಾ.ಪಾರ್ವತಿ ಐತಾಳ್ ಎರಡೂ ಭಾಷೆಗಳನ್ನು ಅರಗಿಸಿಕೊಂಡು ಕನ್ನಡದ ಮಹತ್ವದ ಕೃತಿಗಳನ್ನು ಮಲಯಾಳಕ್ಕೆ ಅನುವಾದಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಲೇಖಕಿ ಡಾ.ಪಾರ್ವತಿ ಜಿ.ಐತಾಳ್ ಕೇರಳ ಹಾಗೂ ಕರ್ನಾಟಕದ ರಂಗ ಚಟುವಟಿಕೆಗಳ ಬಗ್ಗೆ ಮಾತನಾಡಿದರು. ಪುಸ್ತಕದ ಪ್ರಕಾಶಕರಾದ ಅತೀಖ್ ಬೇವಿಂಜೆ, ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸುಜಾತಾ, ಮಂಜೇಶ್ವರ ಕಾಲೇಜಿನ ಹಿರಿಯ ಮೇಲ್ವಿಚಾರಕ ದಿನೇಶ್ ಕುಮಾರ್, ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಮತ್ತು ಕಾಲೇಜಿನ ‘ಗಿಳಿವಿಂಡು’ ಸಾಹಿತ್ಯ ಸಂಘದ ಅಧ್ಯಕ್ಷೆ ದೀಕ್ಷಿತಾ ಉಪಸ್ಥಿತರಿದ್ದರು.
ಕನ್ನಡ ವಿಭಾಗ ಮುಖ್ಯಸ್ಥ ಶಿವಶಂಕರ ಪಿ. ಸ್ವಾಗತಿಸಿದರು. ಡಾ.ಸುಜಿತ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಜಯಂತಿ ವಂದಿಸಿದರು.