ಮಹಾಮಂಡಲೇಶ್ವರ ಮನುಕುಲದ ಕಲ್ಯಾಣಕ್ಕೆ ಸಿಕ್ಕ ಜವಾಬ್ದಾರಿ

Bel_Maha Mandala
Published on

ಬೆಳ್ತಂಗಡಿ: ಎಲ್ಲರಿಗೂ ಸಮಬಾಳು-ಸಮಪಾಲು ಎಂಬ ಲೋಕಕಲ್ಯಾಣ ಕೆಲಸಗಳ ನಿಟ್ಟಿನಲ್ಲಿ ಸಿಕ್ಕಿರುವ ಈ ಮಹತ್ತರ ಜವಾಬ್ದಾರಿ ಜನಕಲ್ಯಾಣಕ್ಕೆ, ಭಾತೃತ್ವ ನಿರ್ಮಾಣಕ್ಕೆ, ದೇಶ, ಧರ್ಮವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಿಕ್ಕ ಅವಕಾಶವಾಗಿದೆ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಅತ್ಯುನ್ನತ ಹುದ್ದೆಯಾದ ಮಹಾಮಂಡಲೇಶ್ವರ ಪಟ್ಟಾಭಿಷಿಕ್ತರಾಗಿ ಆಗಮಿಸಿದ ಅವರು ಭಾನುವಾರ ಕನ್ಯಾಡಿ ಶ್ರೀರಾಮ ಮಹಾಸಂಸ್ಥಾನದಲ್ಲಿ ಆಶೀರ್ವಚನ ನೀಡಿದರು.

ಶಂಕರಾಚಾರ್ಯರು ಸ್ಥಾಪಿಸಿದ 13 ಅಖಾಡಗಳ ಪೈಕಿ 7 ಸನ್ಯಾಸಿ ಹಾಗೂ 6 ವೈಷ್ಣವ ಆಖಾಡಗಳಿದ್ದು ಪಂಚದಶನಾಂ ಜುನಾ ಅಖಾಡ ಡ ಬಹುದೊಡ್ಡ ಅಖಾಡವಾಗಿದೆ. ಇಲ್ಲಿ ಜವಾಬ್ದಾರಿ ನಿರ್ವಹಿಸುವ ಉತ್ತಮ ಅವಕಾಶ ಸಿಕ್ಕಿದೆ. ಕೊಠಾರಿ, ಸ್ಥಾನ ಪತಿ, ಮಾಂತ್, ಶ್ರೀಮಾಂತ್ ಇತ್ಯಾದಿ ಹುದ್ದೆಗಳು ಸಾಧನೆಯ ಬಲದಲ್ಲಿ ಸಿಗುತ್ತವೆ. ಇಂತವರ ಸಾಧನೆ ಇನ್ನಷ್ಟು ಎತ್ತರಕ್ಕೆ ಏರಿದಾಗ ಅವರಿಗೆ ಗೊತ್ತಿಲ್ಲದಂತೆ ಅವರ ಮಾಹಿತಿ, ಜನಕಲ್ಯಾಣ ಕೆಲಸಗಳನ್ನು ಅವಲೋಕಿಸಿ ಮಹಾಮಂಡಲೇಶ್ವರ ಪದವಿಗೆ ಅರ್ಹತೆ ನೀಡಲಾಗುತ್ತದೆ ಎಂದರು.

ಮಾಜಿ ಎಂಎಲ್‌ಸಿ ಹರೀಶ್ ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸರಾವ್, ಉಜಿರೆ ಗ್ರಾಪಂ ಅಧ್ಯಕ್ಷೆ ಉಷಾ ಕಿರಣ ಕಾರಂತ್, ಮಾಜಿ ಅಧ್ಯಕ್ಷೆ ಪುಷ್ಪಾವತಿ ಶೆಟ್ಟಿ, ಶೈಲೇಶ್ ಕುಮಾರ್, ಅಭಿನಂದನ್ ಹರೀಶ್ ಕುಮಾರ್, ಸದಾನಂದ ಉಂಗಿಲಬೈಲು, ರಾಜೇಶ್ ಪೂಜಾರಿ, ಪದ್ಮನಾಭ ಶೆಟ್ಟಿಗಾರ್, ಪ್ರೀತಂ ಧರ್ಮಸ್ಥಳ, ಸೀತಾರಾಮ ಬಿ.ಎಸ್., ಸುಧೀರ್ ಸುವರ್ಣ, ಹುಕುಂ ರಾಮ್ ಪಟೇಲ್, ಪ್ರಶಾಂತ ಪಾರೆಂಕಿ, ಅರವಿಂದ ಕಾರಂತ, ಪ್ರಕಾಶ ನಾರಾಯಣ ರಾವ್, ಚೆನ್ನಕೇಶವ ಅರಸಮಜಲು, ಪೂರ್ಣಿಮಾ ಮುಂಡಾಜೆ, ಕೃಷ್ಣಪ್ಪ ಗುಡಿಗಾರ್, ಸುಂದರ ಹೆಗ್ಡೆ, ವಿನಿತ್ ಕೋಟ್ಯಾನ್ ಉಪಸ್ಥಿತರಿದ್ದರು.

ಶ್ರೀಗಳಿಗೆ ಭವ್ಯ ಸ್ವಾಗತ

ಮಹಾಮಂಡಲೇಶ್ವರ ಪಟ್ಟಾಭಿಷಿಕ್ತರಾದ ಸ್ವಾಮೀಜಿಯವರು ಪ್ರಯಾಗ್‌ರಾಜ್‌ನಿಂದ ಚಾರ್ಮಾಡಿ ಮೂಲಕ ವಾಹನದಲ್ಲಿ ಆಗಮಿಸಿದರು. ಉಜಿರೆ ಪೇಟೆಯಲ್ಲಿ, ಕನ್ಯಾಡಿ ಶಾಲೆ ಬಳಿ ಭವ್ಯ ಸ್ವಾಗತ ಕೋರಲಾಯಿತು. ಕನ್ಯಾಡಿ ಶಾಲೆಯಿಂದ ಶ್ರೀರಾಮ ಕ್ಷೇತ್ರದವರೆಗೆ ವಾದ್ಯ ಘೋಷಗಳೊಂದಿಗೆ ಮೆರವಣಿಗೆ ನಡೆಯಿತು.

ತೊಂದರೆಗಳು ಬಂದಾಗ ಅವುಗಳನ್ನು ನಿಭಾಯಿಸಲು ಸೇನೆಯಂತೆ ಆಖಾಡಗಳನ್ನು ಸೃಷ್ಟಿಸಲಾಗಿದೆ. ದೇಶವನ್ನು, ಧರ್ಮವನ್ನು ಉನ್ನತ ಸ್ಥಿತಿಗೆ ಕೊಂಡೊಯ್ಯಲು ಸಾಧು ಪರಂಪರೆ ಅತ್ಯಗತ್ಯ. 13 ಅಖಾಡದಲ್ಲಿ 100 ಸ್ವಾಮೀಜಿಗಳಿಗೆ ಮಾತ್ರ ಮಹಾಮಂಡಲೇಶ್ವರ ಪದವಿ ಇದೆ. ಪಂಚದಶನಾಂ ಜುನಾ ಅಖಾಡದಲ್ಲಿ 25 ಲಕ್ಷಕ್ಕಿಂತ ಅಧಿಕ ಸಾಧು ಸಂತರಿದ್ದಾರೆ. ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net