ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿ ಮನೆ ತೆರವು ವಿಚಾರ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದು, ಆಡಳಿತ ಮಂಡಳಿಯ ಅಧ್ಯಕ್ಷ ಸೇರಿ ಹಲವು ಮಂದಿಯ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಅವರಿದ್ದ ಮನೆ ಬುಧವಾರ ಬೆಳಗ್ಗೆ ಹಾನಿಯಾದ ಸ್ಥಿತಿಯಲ್ಲಿ ಕಾಣಿಸಿದ್ದು, ಮಂಗಳವಾರ ತಡರಾತ್ರಿ ಅನಾಮಿಕ ಮುಸುಕುಧಾರಿಗಳು ಜೆಸಿಬಿ ಮೂಲಕ ಪುಡಿಗೈದ ಆರೋಪ ಕೇಳಿ ಬಂದಿದೆ. ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ, ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯ ವಿನಯ ಸುವರ್ಣ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ, ಸಂಘಟನೆಗಳ ಮುಖಂಡರು ಏಕಾಏಕಿ ಮತ್ತು ಅನಽಕೃತವಾಗಿ ತೆರವು ಮಾಡಿದ ವಿಚಾರದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಪಕ್ಕದಲ್ಲೇ ಪೊಲೀಸ್ ಠಾಣೆಯಿದ್ದರೂ ರಾತ್ರಿ ಬಂದು ಮನೆಯನ್ನು ತೆರವುಗೊಳಿಸಲಾಗಿದೆ. ಪೊಲೀಸರು ಅನಽಕೃತ ತೆರವಿನ ಕುರಿತಾಗಿ ಕ್ರಮ ಕೈಗೊಳ್ಳದೆ ಜಾಗದ ಕುರಿತು ಮಾತನಾಡಿದ ವಿಚಾರಕ್ಕೆ ಸೇರಿದವರಿಂದ ಅಸಮಾಧಾನದ ವ್ಯಕ್ತವಾಯಿತು.
ಮನೆ ನೆಲಸಮಗೊಂಡಲ್ಲಿ ಹಾಗೂ ಪೊಲೀಸ್ ಠಾಣೆ ಎದುರು ನೂರಾರು ಮಂದಿ ಜಮಾಯಿಸಿದ್ದರು. ಮಾಜಿ ಸಂಸದ, ವಿಧಾನ ಪರಿಷತ್ ಸದಸ್ಯ ಕಿಶೋರ್ ಪುತ್ತೂರು, ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಪಕ್ಷದ ಪ್ರಮುಖರಾದ ಗೋಪಾಲಕೃಷ್ಣ ಹೇರಳೆ, ಚನಿಲ ತಿಮ್ಮಪ್ಪ ಗೌಡ, ಭಾಮಿ ಅಶೋಕ್ ಶೆಣೈ, ಭಾಮಿ ಜಗದೀಶ್ ಶೆಣೈ, ಸಚಿನ್ ಶೆಣೈ, ಮುರಳೀಕೃಷ್ಣ ಹಸಂತಡ್ಕ, ಅಜಿತ್ ರೈ ಹೊಸಮನೆ, ಯುವರಾಜ್ ಪೆರಿಯತ್ತೋಡಿ, ಪ್ರಶಾಂತ್ ಮಾರ್ತಾ, ಸಾಜ ರಾಧಾಕೃಷ್ಣ ಆಳ್ವ ಇದ್ದರು.
ಹಲವು ಮಂದಿ ವಿರುದ್ಧ ದೂರು
ಮನೆ ನೆಲಸಮಗೊಳಿಸಿದ ವಿಚಾರದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯ ವಿನಯ ಸುವರ್ಣ, ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ದೂರು ನೀಡಿದರು. ಮನೆ ಕೆಡವಿದ ಆರೋಪಿಗಳು ಹಾಗೂ ಅದಕ್ಕೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಹಾಗೂ ಜೆಸಿಬಿ ಯಂತ್ರಗಳ ಮುಟ್ಟುಗೋಲಿಗೆ ಆಗ್ರಹಿಸಿ ಪೊಲೀಸ್ ಠಾಣೆಯ ಮುಂದೆ ನೂರಾರು ಮಂದಿ ಧರಣಿ ಕುಳಿತರು. ಎರಡು ದಿನಗಳಲ್ಲಿ ಸೂಕ್ತ ಕ್ರಮ ಆಗದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಸಿಲಿಂಡರ್ ತೋಡಿನಲ್ಲಿ
ಮನೆಯ ಪಕ್ಕದ ಎಸ್.ಪಿ.ಟಿ. ತೋಡಿನಲ್ಲಿ ಮನೆಯ ಅಡುಗೆಗೆ ಬಳಸುತ್ತಿದ್ದ ೨ ಗ್ಯಾಸ್ ಸಿಲಿಂಡರ್‌ಗಳನ್ನು ಎಸೆಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮನೆಯ ನೆಲಸಮದೊಂದಿಗೆ ನಾಲ್ಕು ನಾಯಿ ಮರಿಗಳು ಮಣ್ಣಿನಡಿಗೆ ಬಿದ್ದಿವೆ ಎಂಬ ವಿಚಾರದಲ್ಲಿ ಸ್ಥಳದಲ್ಲಿದ್ದವರು ಮರುಕ ವ್ಯಕ್ತಪಡಿಸಿದರು.
ರಾಜೇಶ್ ಬನ್ನೂರು ಅವರ ಜತೆ ಸುಮಾರು ೧೫ ದಿನಗಳಿಂದ ಮಾತುಕತೆ ನಡೆಸುತ್ತಿದ್ದು, ನಿನ್ನೆಯೂ ಕರೆದಿದ್ದೆವು. ಅವರ ವಕೀಲರು ಬಂದಿದ್ದರು. ದೊಡ್ಡ ಮೊತ್ತದ ಹಣವನ್ನು ಕೇಳಿದ್ದರು. ೩೦ ದಿವಸಗಳ ಸಮಯಾವಕಾಶ ಕೇಳಿದ್ದರು. ಜತೆಗೆ ಆದರೆ ನೋಡ್ತೇವೆ ಎಂದಿದ್ದರು. ನಮಗೆ ಮೊನ್ನೆಯಿಂದ ಕರೆ ಬರುತ್ತಿದೆ. ನಾವು ೨೦೦ ಮಂದಿ ಬರುತ್ತೇವೆ, ತೆರವು ಮಾಡುತ್ತೇವೆ ಎಂದು. ವಿದೇಶದಿಂದಲೂ ಕರೆ ಮಾಡಿ ಯುವಕರ ತಂಡವಿದೆ ಎನ್ನುತ್ತಿದ್ದಾರೆ. ಜಾಗದ, ಮನೆಯ ಕಾನೂನಾತ್ಮಕ ಖಾತೆ, ದಾಖಲೆಗಳಿದ್ದರೆ ಅವರಿಗೆ ಕೋರ್ಟಿನಲ್ಲಿ ಫೈಟ್ ಮಾಡಬಹುದು.
| ಅಶೋಕ್ ಕುಮಾರ್ ರೈ
ಶಾಸಕರು
ಪುತ್ತೂರಿನಲ್ಲಿ ೨೦ ವರ್ಷಗಳ ಹಿಂದೆ ಇಂತಹ ಗೂಂಡಾಗಿರಿ ಇತ್ತು. ಅದನ್ನು ಇಲ್ಲಿನ ಹಿರಿಯರು ಹಿಮ್ಮೆಟ್ಟಿಸಿ ನಿಲ್ಲಿಸಿದ್ದಾರೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ, ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರು ಬಂದಾಗ ಇದು ಮರುಕಳಿಸಿದೆ. ಅಭಿವೃದ್ಧಿಗೆ ಬಿಜೆಪಿ ಎಂದಿಗೂ ಅಡ್ಡ ಬರುವುದಿಲ್ಲ. ಮೂಕಪ್ರಾಣಿಗಳು, ಹಿರಿಯರೊಬ್ಬರ ಮೇಲೆ ನಡೆಸಲಾದ ದೌರ್ಜನ್ಯವನ್ನು ಕಂಡು ಅಶೋಕ್ ರೈ ಮೇಲಿನ ಗೌರವ ಹೋಯ್ತು. ಶಾಸಕರು ನೀಡಿದ ಹೇಳಿಕೆಯಂತೆ ದೇವರ ಭಕ್ತರು ಎಂದಿಗೂ ಇದನ್ನು ಮಾಡಲು ಸಾಧ್ಯವಿಲ್ಲ.
| ಕಿಶೋರ್ ಕುಮಾರ್ ಬೊಟ್ಯಾಡಿ
ಎಂಎಲ್‌ಸಿ