

ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ
ಶಾಲೆಗೆ ರಜೆ ಸಿಕ್ಕಿತೆಂದರೆ ಸಾಕು ಮಕ್ಕಳನ್ನು ಹೇಗಪ್ಪ ಸುಧಾರಿಸುವುದು ಎಂಬುದು ಅಮ್ಮಂದಿರ ಬಾಯಲ್ಲಿ ಕೇಳಿ ಬರುವ ಮಾತು. ಕರೊನಾದ ನಂತರ ಮಕ್ಕಳು ಆನ್ಲೈನ್ ಕ್ಲಾಸ್ ನೆಪದಲ್ಲಿ ಮೊಬೈಲ್‌ಗೆ ದಾಸರಾಗಿರುವುದು ಸುಳ್ಳಲ್ಲ. ಗೇಮ್ಗಳನ್ನು ಡೌನ್‌ಲೋಡ್ ಮಾಡಿಕೊಂಡು ಗುಂಪುಕೂಡಿ ಆಟ ಆಡುವ ಮಕ್ಕಳನ್ನು ಮೊಬೈಲ್ನಿಂದ ದೂರ ಇರಿಸುವುದೇ ಪಾಲಕರಿಗೆ ದೊಡ್ಡ ಸವಾಲಾಗಿದೆ.
ವರ್ಷವಿಡೀ ಶಾಲೆಯ ಓದು ಪಾಠಗಳ ಮಧ್ಯೆ ಬೇಸಿಗೆ ರಜೆ ವಿದ್ಯಾರ್ಥಿಗಳ ಪಾಲಿಗೆ ಪಠ್ಯೇತರ ಚಟುವಟಿಕೆಗಳ ಕಡೆ ಮುಖ ಮಾಡುವ ಸಮಯ. ಉಪನಯನ ಸಂಸ್ಕಾರದ ನಂತರ ವಿಪ್ರ ವಟುಗಳಿಗಾಗಿಯೇ ಹಲವು ಕಡೆ ವಸಂತ ವೇದ ಶಿಬಿರಗಳು ಆಸಕ್ತಿಯ ಕ್ಷೇತ್ರವಾಗಿ ಕಳೆದ ಮೂರು ದಶಕಗಳಿಂದ ರಾಜ್ಯಾದ್ಯಂತ ಚಾಲ್ತಿಯಲ್ಲಿದೆ. ಮಂತ್ರಾಭ್ಯಾಸಕ್ಕಾಗಿ ವಸಂತ ವೇದ ಶಿಬಿರಗಳನ್ನು ವಟುಗಳಿಗೆ ಮಂತ್ರಾಭ್ಯಾಸ, ವೇದಗಳ ಅಧ್ಯಯನ, ಪೂಜಾ ವಿಧಿವಿಧಾನಗಳ ಪ್ರಾಥಮಿಕ ಜ್ಞಾನವನ್ನು ನೀಡಲು ಆಯೋಜಿಸುತ್ತಿದ್ದು, ಸಂಪೂರ್ಣ ಉಚಿತವಾಗಿರುತ್ತವೆ. ಸಣ್ಣ ಪ್ರಾಯದಲ್ಲಿಯೇ ಮಕ್ಕಳಲ್ಲಿ ಧಾರ್ಮಿಕ ಮತ್ತು ಸಂಸ್ಕಾರದ ಜಾಗೃತಿಯನ್ನು ಮೂಡಿಸುತ್ತವೆ.
ಶಿಬಿರ ಕನಿಷ್ಠ 20 ದಿನಗಳಿಂದ 40 ದಿನಗಳವರೆಗೆ ನಡೆಯುತ್ತದೆ, ಕನಿಷ್ಠ ಮೂರು ವರ್ಷಗಳ ಕಾಲ ಶಿಬಿರದಲ್ಲಿ ಭಾಗವಹಿಸಿ, ಪೌರೋಹಿತ್ಯ ವಿಧಿ ವಿಧಾನಗಳ ಪ್ರಾಥಮಿಕ ಜ್ಞಾನವನ್ನು ಗಳಿಸಬಹುದು, ಸ್ಪಷ್ಟ ಉಚ್ಚಾರಣೆ, ಮಂತ್ರಗಳ ಸ್ವರ ಏರಿಳಿತಗಳ ಅನುಭವ, ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮೂಡಿಸಲು ಸಹಕಾರಿ. ವೇದಗಳಲ್ಲಿ ಬರುವ ಸೂಕ್ತಗಳು, ಗಾಯತ್ರಿ ಮಂತ್ರ ಉಚ್ಚಾರಣೆ, ಪಾರಾಯಣಗಳು, ನಿತ್ಯ ಜಪ, ನಿತ್ಯ ಪೂಜಾ ವಿಧಿವಿಧಾನ, ಪವಮಾನ ಸಹಿತ ಹಲವು ವಿಚಾರಗಳನ್ನು ವಸಂತ ವೇದ ಶಿಬಿರದಲ್ಲಿ ಬೋಧಿಸಲಾಗುತ್ತದೆ. ಕೇವಲ ಬೋಧನೆ ಮಾತ್ರವಲ್ಲದೆ, ಮಂತ್ರಗಳ ಕಂಠಪಾಠ, ಮನನ ಮಾಡುವುದು ಹೇಳಿಕೊಡಲಾಗುತ್ತದೆ. ವಿದ್ಯಾರ್ಥಿಯು ಈ ಶಿಬಿರದಲ್ಲಿ ಭಾಗವಹಿಸಿ, ಭವಿಷ್ಯದಲ್ಲಿ ಪೌರೋಹಿತ್ಯವನ್ನು ಜೀವನಾಧಾರವಾಗಿಸಿಕೊಳ್ಳಲು ಆಸಕ್ತನಾದರೆ ಈ ಶಿಬಿರದಲ್ಲಿ ಸಿಗುವ ಪ್ರಾಥಮಿಕ ಜ್ಞಾನ ಭವಿಷ್ಯದ ಕಲಿಕೆಗೆ ಸಹಕಾರಿ.
ಹಲವು ವರ್ಷಗಳಿಂದ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ವಸಂತ ವೇದ ಶಿಬಿರದಲ್ಲಿ ಗುರುಗಳಾಗಿ ಪಾಲ್ಗೊಳ್ಳುತ್ತಿದ್ದೇವೆ. ರಜೆ ಸಮಯದಲ್ಲಿ ಅನಗತ್ಯ ವಿಷಯಗಳಲ್ಲಿ ಮಕ್ಕಳು ತೊಡಗಿಕೊಳ್ಳದಂತೆ ವಸಂತ ವೇದ ಶಿಬಿರ ಮಕ್ಕಳ ಶಾರೀರಿಕ, ಮಾನಸಿಕ ಆರೋಗ್ಯ ವೃದ್ಧಿಯೊಂದಿಗೆ ಸ್ಪಷ್ಟ ಉಚ್ಚಾರಣೆ ಮತ್ತು ಏಕಾಗ್ರತೆ ಮೂಡಿಸುತ್ತದೆ. ನಾನಾ ಕಡೆಗಳಿಂದ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದಾಗ ಪರಸ್ಪರ ಪರಿಚಯ, ಜನರೊಂದಿಗೆ ಬೆರೆಯುವಂತಾಗುತ್ತದೆ. ಹೀಗಾಗಿ ಸಾಮಾಜಿಕವಾಗಿ ಮಕ್ಕಳು ಬೆಳೆಯಲು ಅವಕಾಶ ಸಿಕ್ಕಂತಾಗುತ್ತದೆ.-ರವಿಶಂಕರ ಬಿ. ರಾಮ ಕಾರಂತ ಪದ್ಯಾಣ, ಗುರುಗಳು, ವಸಂತ ವೇದ ಶಿಬಿರ, ಮಧೂರು
ಕಳೆದ 19 ವರ್ಷಗಳಿಂದ ಬೆಳ್ತಂಗಡಿಯ ತುಳು ಶಿವಳ್ಳಿ ಸಭಾ ವತಿಯಿಂದ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಶ್ರಯದಲ್ಲಿ ಕೀರ್ತಿಶೇಷ ವಿಜಯ ರಾಘವ ಪಡುವೆಟ್ನಾಯರ ನೇತೃತ್ವದಲ್ಲಿ ಆರಂಭಗೊಂಡ ವಸಂತ ಪಾಠ ಶಿಬಿರದಲ್ಲಿ ಪ್ರತಿ ವರ್ಷ 100 ರಿಂದ 150 ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ಪ್ರತಿ ವರ್ಷ 20 ದಿನದ ಒಂದು ಶಿಬಿರ ನಾಲ್ಕು ವರ್ಷದ ಬ್ಯಾಚ್‌ನಂತೆ ನಡೆದುಕೊಂಡು ಬರುತ್ತಿದೆ. ಪೇಜಾವರ ಮಠದ ಶಿಷ್ಯಂದಿರು ಆರಂಭದಿಂದಲೂ ಗುರುಗಳಾಗಿ ಶಿಬಿರವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿದ್ದರೂ ಇಲ್ಲಿ ಕಲಿಸಿಕೊಟ್ಟ ಸಂಸ್ಕಾರವನ್ನು ಮುಂದುವರಿಸಿಕೊಂಡು ಬಂದಿರುವುದು ಶಿಬಿರವನ್ನು ನಡೆಸಿಕೊಂಡು ಬಂದ ನಮಗೆ ಸಾರ್ಥಕ ಭಾವವನ್ನು ಮೂಡಿಸುತ್ತದೆ.-ರಾಘವೇಂದ್ರ ಬೈಪಡಿತ್ತಾಯ, ಅಧ್ಯಕ್ಷರು, ತುಳು ಶಿವಳ್ಳಿ ಸಭಾ ಬೆಳ್ತಂಗಡಿ