More

    ಸೂರು ನಿರ್ಮಿಸಿ ಕೊಟ್ಟ ಕ್ರೀಡಾಭಿಮಾನಿಗಳು

    ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

    ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ಹಲವಾರು ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶ ಹರಿಹರ ಪಲ್ಲತ್ತಡ್ಕದಲ್ಲಿ ಆರಂಭಗೊಂಡ ಸಚಿನ್ ಕ್ರಿಕೆಟರ್ಸ್‌ ಕ್ರೀಡಾ ಸಂಘ ದಾನಿಗಳ ನೆರವು ಪಡೆದು ಅಶಕ್ತ ಕುಟುಂಬದ ಸಹೋದರ- ಸಹೋದರಿಯರಿಬ್ಬರಿಗೆ ಸುಸಜ್ಜಿತ ಮನೆ ನಿರ್ಮಿಸಿ ಕೊಡುವ ಮೂಲಕ ಮಾದರಿಯಾಗಿದೆ. ಕ್ರಿಕೆಟ್ ದೇವರ ಹೆಸರಲ್ಲಿನ ಕ್ರೀಡಾ ಸಂಸ್ಥೆ ದೇವರು ಮೆಚ್ಚುವ ಮಾನವೀಯ ಕಾರ್ಯ ಮಾಡಿ ಮಾದರಿಯಾಗಿದೆ. ಕ್ರೀಡಾ ಸಂಘ ಆಟಕ್ಕೆ ಸೀಮಿತವಾಗದೆ ಅದರಾಚೆಗಿನ ಮಾನವೀಯ ಕಾರ್ಯದೆಡೆಗೂ ಮನಸ್ಸು ಮಾಡಿ ಸೈ ಎನಿಸಿಕೊಂಡಿದೆ.

    ಸಂಕಷ್ಟ ನಿವಾರಣೆಗೆ ಸಹಕಾರ: ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಮಿತ್ತಮಜಲು ಎಂಬಲ್ಲಿಯ ನಿವಾಸಿಗಳಾದ ಶಿವರಾಮ ಆಚಾರ್ಯ, ರತ್ನಾವತಿ ಆಚಾರ್ಯ ಸಹೋದರ-ಸಹೋದರಿಯ ವಾಸಿಸುವ ಮನೆ ಸಮರ್ಪಕವಾಗಿ ಇರಲಿಲ್ಲ. ಒಂದೆಡೆ ಬಡತನ ಮತ್ತೊಂದೆಡೆ ಮುರಿದು ಬೀಳುವ ಸ್ಥಿತಿಯಲ್ಲಿರುವ ಮನೆ ಇವರನ್ನು ಕಂಗಾಲಾಗಿಸಿತ್ತು. ಅವರಿಬ್ಬರ ಕೈಯಲ್ಲಿ ಮನೆ ದುರಸ್ತಿ ಮಾಡಲು ಸಾಧ್ಯವಿರಲಿಲ್ಲ. ಸರ್ಕಾರದಿಂದ ಯಾವುದಾದರೂ ಯೋಜನೆಯಡಿ ಮನೆ ದುರಸ್ತಿಗೊಳಿಸುವ ಎಂದರೆ ದಾಖಲೆಗಳು ಸರಿ ಇಲ್ಲದೆ ನಡೆಸಿದ ಪ್ರಯತ್ನಗಳೆಲ್ಲವೂ ವ್ಯರ್ಥವಾಯಿತು. ಆಗ ದಿಕ್ಕೇ ತೋಚದ ಸ್ಥಿತಿಯಲ್ಲಿದ್ದ ಕುಟುಂಬದ ನೆರವಿಗೆ ಸಚಿನ್ ಕ್ರಿಕೆಟರ್ಸ್ ಕ್ರೀಡಾ ಸಂಘ ಬಂತು.

    ಶ್ರಮ-ದಾನದ ಮೂಲಕ ನಿರ್ಮಾಣ

    ಅವರಿಬ್ಬರ ದಯನೀಯ ಸ್ಥಿತಿಗೆ ತಂಡದ ಮನ ಮಿಡಿಯಿತು. ಸಂಘದ ಸಾರಥ್ಯ ವಹಿಸಿದ್ದ ಪ್ರದೀಪ್ ಕಜ್ಜೋಡಿ ಅವರು ಮನೆ ನಿರ್ಮಿಸಿಕೊಡುವ ಚಿಂತನೆ ಮಾಡಿದರು. ಅದಕ್ಕೆ ಇತರೆ ಸದಸ್ಯರ ಬೆಂಬಲವೂ ದೊರಕಿತು. ದಾನಿಗಳ ಸ್ಪಂದನೆಯೂ ಸಿಕ್ಕಿತು. ತಡಮಾಡದೆ ಮನೆ ನಿರ್ಮಾಣದ ಸಾಹಸಕ್ಕೆ ಇಳಿದು ಬಿಟ್ಟರು. ಪ್ರದೀಪ್ ಕಜ್ಜೋಡಿ ನೇತೃತ್ವದಲ್ಲಿ ಸಂಘದ ಸದಸ್ಯರು, ಊರವರು ಸೇರಿದಂತೆ ದಾನಿಗಳು ರಾತ್ರಿ-ಹಗಲು ಶ್ರಮ ಸೇವೆ ಮೂಲಕ ಪಾಯ, ತಳಪಾಯ, ಗೋಡೆ, ತಾರಸಿ ಎಲ್ಲ ಕಾರ್ಯಗಳನ್ನು ನಡೆಸಿದರು. ಮರಳು, ಮುರ ಕಲ್ಲು, ಕೆಂಪುಕಲ್ಲು, ಸಿಮೆಂಟು, ಕಬ್ಬಿಣ ಹೊತ್ತು ಮನೆ ನಿರ್ಮಾಣ ಆರಂಭಿಸಿದರು. ಕಲ್ಲು, ದಾರಂದ, ಸಿಮೆಂಟ್, ಟೈಲ್ಸ್ ಮತ್ತಿತರ ವಸ್ತುಗಳನ್ನು ದಾನವಾಗಿ ಕೇಳಿ ಪಡೆದರು.

    ನಾಳೆ ಗೃಹ ಪ್ರವೇಶ, ಹಸ್ತಾಂತರ

    ತಾರಸಿ ಮನೆ ಸುಮಾರು 2 ಲಕ್ಷಕ್ಕೂ ವೆಚ್ಚದಲ್ಲಿ ಅತಿ ಕಡಿಮೆ ಅವಧಿಯಲ್ಲಿ ನಿರ್ಮಾಣಗೊಂಡಿತು. ಸಾರಣೆ, ಟೈಲ್ಸ್ ಅಳವಡಿಕೆ, ಪೈಂಟಿಂಗ್ ಕಾರ್ಯ ಭರದಿಂದ ಸಾಗುತ್ತಿದೆ. ಗುಣಮಟ್ಟದ ಮನೆ ನಿರ್ಮಿತವಾಗಿದೆ. ಮೇ 1ರಂದು ನೂತನ ನಿವಾಸದ ಗೃಹ ಪ್ರವೇಶ ನಡೆಯಲಿದೆ. ಅಲ್ಲದೆ ಈ ದಿನ ಮನೆಯ ಹಸ್ತಾಂತರ ನೆರವೇರಲಿದೆ.

    ಸಹೋದರ-ಸಹೋದರಿ ವಾಸವಿದ್ದ ಮನೆಯ ದುಸ್ಥಿತಿ ಕಂಡು ಬೇಸರವಾಯಿತು. ತಕ್ಷಣ ತಂಡದ ಸದಸ್ಯರಲ್ಲಿ ಇವರಿಗೆ ಮನೆ ನಿರ್ಮಿಸಿ ಕೊಡುವ ಬಗ್ಗೆ ಚರ್ಚಿಸಿದೆ. ಅವರ ಸಂಪೂರ್ಣ ಬೆಂಬಲ ದೊರಕಿತು. ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ನೀಡಿದರು. ಸರ್ವರ ಸಹಕಾರದಿಂದ ರಾತ್ರಿ ಹಗಲೆನ್ನದೆ ನಾವೆಲ್ಲರೂ ಒಟ್ಟಾಗಿ ದುಡಿದು ಮನೆ ನಿರ್ಮಿಸಿದ್ದೇವೆ.ಮಾನವೀಯ ಕಾರ್ಯ ನೆರವೇರಿಸಿದ ತೃಪ್ತಿ ಇದೆ.

    -ಪ್ರದೀಪ್ ಕಜ್ಜೋಡಿ, ಮುಖ್ಯಸ್ಥರು, ಸಚಿನ್ ಕ್ರಿಕೆಟರ್ಸ್‌ ಕ್ರೀಡಾ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts