

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಆರಾಧನಾಲಯಗಳಲ್ಲಿ ಆಧ್ಯಾತ್ಮಿಕ ಶಿಕ್ಷಣ ಪ್ರತಿಯೊಬ್ಬರಿಗೆ ಲಭಿಸುವಂತಾದಾಗ ಸನಾತನ ಧರ್ಮ ಮತ್ತಷ್ಟು ಸದೃಢಗೊಳ್ಳಲು ಸಾಧ್ಯ ಎಂದು ಕೊಲ್ಲಂ ಅಮೃತಾನಂದಮಯಿ ಮಠದ ಶ್ರೀಅಮೃತಕೃಪಾನಂದ ಪುರಿ ಸ್ವಾಮೀಜಿ ತಿಳಿಸಿದರು.
ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ- ಮೂಡಪ್ಪ ಸೇವೆಯ ಅಂಗವಾಗಿ ಗುರುವಾರ ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮಂಗಳೂರು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ಪಾಡಿ ಅರಮನೆಯ ಹರಿಪ್ರಸಾದ್, ಕನ್ನಡ ಚಲಚಿತ್ರನಟಿ ಆಶಾ ಭಟ್ ಉಪಸ್ಥಿತರಿದ್ದರು. ಕಾಸರಗೋಡು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಅಧ್ಯಕ್ಷ, ವಕೀಲ ಕರುಣಾಕರನ್‌ನಂಬ್ಯಾರ್ ಪ್ರಧಾನ ಭಾಷಣ ಮಾಡಿದರು.
ನಾರಂಪಾಡಿ ಶ್ರೀಕ್ಷೇತ್ರದ ಪವಿತ್ರಪಾಣಿ ಡಾ.ಕಿಶೋರ್ ಕುಮಾರ್ ಕುಣಿಕುಳ್ಳಾಯ, ಮಧೂರು ಗ್ರಾ.ಪಂ. ಸದಸ್ಯ ರತೀಶ್ ಕೆ, ವಕೀಲ ಅನಂತರಾಮ, ಕೇರಳ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಸಂಶೋಧನಾ ಸಹಾಯಕ ಡಾ.ಜಯಪ್ರಕಾಶ ನಾಯ್ಕ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯ ಶ್ರೀಕೃಷ್ಣ ಕಾರಂತ ಬನ್ನೂರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಶ್ಯಾಮ ಭಟ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಗಟ್ಟಿ ಮನ್ನಿಪ್ಪಾಡಿ ವಂದಿಸಿದರು.
ಜಗತ್ತಿನ ಹಲವು ಪ್ರಾಚೀನ ಸಂಸ್ಕೃತಿಗಳು ನಾಶವಾದರೂ ಸನಾತನ ಧರ್ಮದ ಸತ್‌ಚಿಂತನೆಯ ಫಲವಾಗಿ ಭಾರತೀಯ ಸನಾತನ ಸಂಸ್ಕೃತಿ-ಧರ್ಮ ಅವಿನಾಶಿಯಾಗಿ ಮುಂದುವರಿದಿದೆ. ಸನಾತನ ಧರ್ಮ ಯಾರ ಮೇಲೂ ಸವಾರಿ ಮಾಡಿಲ್ಲ. ಈ ಕಾರಣದಿಂದ ಪೂರ್ವದೇಶಗಳಲ್ಲೂ ಈಬಗ್ಗೆ ಗೌರವಾದರಗಳಿದ್ದು, ಧರ್ಮ ಚಿಂತನೆಗಳು ಜಾಗತಿಕವಾಗಿ ಪ್ರಭಾವ ಬೀರಿದೆ. ಎಂ.ಬಿ.ಪುರಾಣಿಕ್, ಮಂಗಳೂರು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ
ಆಟೋ ಚಾಲಕರಿಂದ ಉಚಿತ ಸೇವೆ
ಮಧೂರು ಸನ್ನಿಧಿಗೆ ಕರ್ನಾಟಕ-ಕೇರಳ ರಾಜ್ಯಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಿದ್ದು ದೇವಾಲಯ ವಠಾರದಲ್ಲಿ ಜನದಟ್ಟಣೆ ನಿಯಂತ್ರಿಸಲು ಸ್ವಯಂಸೇವಕರು ಹರಸಾಹಸ ಪಡುವಂತಾಗಿದೆ. ಕಾಸರಗೋಡಿಂದ ಆಗಮಿಸುವ ಬಸ್‌ಗಳಿಗೆ ಉಳಿಯತ್ತಡ್ಕದ ಪರಕ್ಕಿಲ ವರೆಗೆ ಮಾತ್ರ ಸಂಚರಿಸಲು ಅನುಮತಿಯಿದ್ದು, ಅಲ್ಲಿಂದ ಭಕ್ತರು ಕಾಲ್ನಡಿಗೆಯಲ್ಲಿ ಅಥವಾ ಆಟೋಗಳ ಮೂಲಕ ಆಗಮಿಸುತ್ತಿದ್ದಾರೆ. ಈ ಮಧ್ಯೆ ಬುಧವಾರದಿಂದ ಮಧೂರು-ಉಳಿಯತ್ತಡ್ಕ, ಉಳಿಯತ್ತಡ್ಕ-ಮಧೂರಿಗೆ ಇಲ್ಲಿಯ ಆಟೋ ಚಾಲಕರು ಉಚಿತ ಸೇವೆ ನೀಡುತ್ತಿದ್ದು, ಜನರಿಂದ ಮುಕ್ತ ಶ್ಲಾಘನೆಗೆ ಕಾರಣವಾಗಿದೆ. ಇಲ್ಲಿಯ ಐದೈದು ಆಟೋರಿಕ್ಷಾಗಳು ದಿನಬದಲಿಸಿ ದಿನ ಪಾಳಿಯಲ್ಲಿ ಸೇವೆ ನೀಡುತ್ತಿವೆ.