

ಉಳ್ಳಾಲ: ಮಂಗಳೂರು ವಿಶ್ವವಿದ್ಯಾಲಯ ಮಹಿಳಾ ವಸತಿ ನಿಲಯ ಸಮೀಪ ರಸ್ತೆ ಬದಿಯಿರುವ ಗುಡ್ಡಕ್ಕೆ ಗುರುವಾರ ಬೆಂಕಿ ಬಿದ್ದು ರಸ್ತೆಯುದ್ದಕ್ಕೂ ದಟ್ಟವಾದ ಹೊಗೆ ಆವರಿಸಿದೆ. ಹೊಗೆ ತುಂಬಿದ್ದರಿಂದ ರಸ್ತೆ ಕಾಣದೆ ಎರಡು ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಕೊಣಾಜೆ ಕ್ಯಾಂಪಸ್ ಸಮೀಪ ರಸ್ತೆ ಬದಿಯ ಗುಡ್ಡಕ್ಕೆ ಬೆಂಕಿಬಿದ್ದು ಗಿಡಮರಗಳು ಸುಟ್ಟು ಕರಕಲಾಗಿವೆ. ಈ ಸಂದರ್ಭ ಪರಿಸರದಲ್ಲಿ ದಟ್ಟವಾದ ಹೊಗೆ ಆವರಿಸಿದೆ. ರಸ್ತೆಯುದ್ದಕ್ಕೂ ಬೆಂಕಿಯ ಕೆನ್ನಾಲೆಯೊಂದಿಗೆ ಹೊಗೆಯೂ ಆವರಿಸಿದ ಪರಿಣಾಮ ವಾಹನ ಸವಾರರಿಗೆ ರಸ್ತೆ ಕಾಣದಂತಾಗಿದೆ. ಇದೇ ವೇಳೆ ಕೊಣಾಜೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಇನೋಳಿಗೆ ತೆರಳುತ್ತಿದ್ದ ಖಾಸಗಿ ಕಾಲೇಜಿನ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಎರಡೂ ಬಸ್‌ಗಳ ಮುಂಭಾಗ ನಜ್ಜುಗುಜ್ಜಾಗಿದೆ. ಎರಡೂ ಬಸ್‌ಗಳ ಚಾಲಕರು ಹಾಗೂ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.