

ಮದ್ದೂರು: ಅಧಿಕಾರಿಗಳ ಕಿರುಕುಳದಿಂದ ಬೇಸತ್ತ ಪೌರಕಾರ್ಮಿಕ ನೇಣು ಬಿಗಿದುಕೊಂಡು ಸೋಮವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದು, ಮೂವರು ಮಕ್ಕಳೀಗ ಅಪ್ಪನನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ನಾರಾಯಣ್(35) ಮೃತ. ಪುರಸಭೆಯಲ್ಲಿ ಕಾಯಂ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಇವರು ಪಟ್ಟಣದ ಸಿದ್ದಾರ್ಥನಗರ ಬಡಾವಣೆಯಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಸಾವಿಗೂ ಮುನ್ನಾ, "ನನ್ನ ಸಾವಿಗೆ ಪುರಸಭೆಯ ಮುಖ್ಯಾಧಿಕಾರಿ ಮುರಗೇಶ್ ಹಾಗೂ ಆರೋಗ್ಯ ನಿರೀಕ್ಷಕ ರಸಿಮ್ಖಾನ್ ಕಾರಣ' ಎಂದು ಡೆತ್ನೋಟ್ ಬರೆದಿಟ್ಟಿದ್ದಾರೆ.
ನಾರಾಯಣ್ರ ಪತ್ನಿ ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದು, ಅವರನ್ನು ನಾರಾಯಣ್ರ ಅತ್ತೆ ನೋಡಿಕೊಳ್ಳುತ್ತಿದ್ದಾರೆ. ಪುರಸಭೆಯಲ್ಲಿ 12 ವರ್ಷಗಳಿಂದ ನಾರಾಯಣ್ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳ ಹಿಂದೆ ಯಾವುದೇ ಸ್ವಚ್ಛತಾ ಸಕಲರಣೆ ಇಲ್ಲದೆ ಬರಿಗೈಯಲ್ಲಿ ಮ್ಯಾನ್ಹೋಲ್ ಸ್ವಚ್ಛಗೊಳಿಸಿದ್ದರು ಎನ್ನಲಾಗಿದೆ.
ಈ ಸಂಬಂಧ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಣೆಯಿಂದ ತಾನೇ ಮ್ಯಾನ್ಹೋಲ್ಗೆ ಇಳಿದಿರುವುದಾಗಿ ಒಪ್ಪಿಕೊಳ್ಳುವಂತೆ ಅಧಿಕಾರಿಗಳು ಒತ್ತಡ ಏರುವ ಮೂಲಕ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ನಾರಾಯಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ತಾಯಿ ಇಲ್ಲದ ಕೊರಗಿನಲ್ಲೇ ಇದ್ದ ಮಕ್ಕಳೀಗ ತಂದೆಯನ್ನೂ ಕಳೆದುಕೊಂಡು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.