

ಬಾಗಲಕೋಟೆ: ಡೆತ್ನೋಟ್ ಬರೆದಿಟ್ಟು ಹೈಸ್ಕೂಲ್ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುನಗುಂದ ತಾಲೂಕಿನ ಮೂಗನೂರು ಗ್ರಾಮದಲ್ಲಿ ಸಂಭವಿಸಿದೆ.
ಹನುಮಂತ ಪೂಜಾರ(42) ಮೃತ ದುರ್ದೈವಿ. ಇವರು ಕಮತಗಿ ಪಟ್ಟಣದ ಹೊಳೆಹುಚ್ಚೇಶ್ವರ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಮನೆಯಲ್ಲೇ ನೇಣುಬಿಗಿದುಕೊಂಡು ಮೃತಪಟ್ಟಿರುವ ಹನುಮಂತ ಪೂಜಾರ, ಸಾವಿಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ ತನ್ನ ಸಾವಿಗೆ ಯಾರು ಕಾರಣ ಎಂದೂ ವಿವರಿಸಿದ್ದಾರೆ. ಅದರ ಡಿಟೇಲ್ಸ್ ಇಲ್ಲಿದೆ. ಇದನ್ನೂ ಓದಿರಿ ಒಂದೂವರೆ ವರ್ಷದ ಮಗು ಕೊಂದಿದ್ದ ಪಾಪಿ ತಂದೆಗೆ ಗಲ್ಲುಶಿಕ್ಷೆ!
'ನನ್ನ ಸಾವಿಗೆ ತಿಮ್ಮಣ್ಣ ಬಸಪ್ಪ ಹಗೆದಾಳ ಕಮತಗಿ ಕಾರಣ. ಈತ ನನಗೆ ಮೂರು ಲಕ್ಷ ಹಣ ಕೊಡಬೇಕು. ವಾಪಸ್ ಕೇಳಿದರೆ ಕೊಟ್ಟಿಲ್ಲ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದೇನೆ' ಎಂದು ಶಿಕ್ಷಕ ಹನುಮಂತ ಪೂಜಾರ ವಿವರಿಸಿದ್ದಾರೆ. ಜತೆಗೆ ತಿಮ್ಮಣ್ಣ ಬಸಪ್ಪ ಹಗೆದಾಳ ಕಮತಗಿಯ ಫೋನ್ ನಂಬರ್ ಅನ್ನೂ ನಮೂದಿಸಿದ್ದಾರೆ.
ಕಮತಗಿ ಪಟ್ಟಣದಲ್ಲಿ ಸೈಟ್ ಖರೀದಿಸಲು ಶಿಕ್ಷಕ ಹನುಮಂತ ಮುಂದಾಗಿದ್ದರು. ತಿಮ್ಮಣ್ಣ ಹಗೆದಾಳ ಬಳಿ ಸೈಟ್ ಖರೀದಿಸಲು 13 ಲಕ್ಷ ರೂಪಾಯಿಗೆ ಮಾತುಕತೆ ಆಗಿತ್ತು. ಮುಂಗಡವಾಗಿ ಹನುಮಂತ ಅವರು 3 ಲಕ್ಷ ರೂ. ಕೊಟ್ಟಿದ್ದರು. ಬಳಿಕ ಹಣ ವಾಪಸ್ ಕೇಳಿದರೆ ತಿಮ್ಮಣ್ಣ ಕೊಟ್ಟಿರಲಿಲ್ಲವಂತೆ. ಇದೇ ವಿಚಾರವಾಗಿ ಮನನೊಂದ ಶಿಕ್ಷಕ ಸಾವಿನ ಮನೆಯ ಕದ ತಟ್ಟಿದ್ದಾರೆ. ಅಮೀನಗಢ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.