

ಬೆಂಗಳೂರು ದಕ್ಷಿಣ: ಪ್ರತಿ ನಿತ್ಯ ಕ್ಷೇತ್ರದ ಮತದಾರರ ಜತೆ ಒಡನಾಟ ಹೊಂದಿದ್ದೇನೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿಸಿದರೆ ಅಭಿವೃದ್ದಿ ಸಾಧ್ಯವಿಲ್ಲ, ಅಭಿವೃದ್ದಿಗೆ ಬಿಜೆಪಿಯೇ ಭರವಸೆ ಎಂದು ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಂ. ಕೃಷ್ಣಪ್ಪ ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಸಂತಪುರ ವಾರ್ಡ್ನ ವಲ್ಲಭರಾಯಸ್ವಾಮಿಯ ಆಶೀರ್ವಾದ ಪಡೆದು ಅಪಾರ ಪ್ರಮಾಣದ ಬೆಂಬಲಿಗರ ಜತೆ ತೆರೆದ ವಾಹನದಲ್ಲಿ ಮತಯಾಚನೆ ವೇಳೆ ಮಾತನಾಡಿದರು. ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆಯಿದ್ದು, ಜನರಿಗೆ ಭದ್ರತೆ, ಶಾಂತಿ ಮತ್ತು ಅಭಿವೃದ್ಧಿ ಒದಗಿಸುವ ಏಕೈಕ ಪಕ್ಷ ಬಿಜೆಪಿಯಾಗಿದೆ, ಜನ ವಿರೋಧಿ ಪಕ್ಷಗಳನ್ನು ಸೋಲಿಸಿ, ಜನಪರವಾದ ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಕರೊನಾ ಮಹಾಮಾರಿಯಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯುಂಟಾಗಿತ್ತು, ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೆ ಶೇ.80 ಅಭಿವೃದ್ದಿ ಕಾಮಗಾರಿಗಳು ಮುಕ್ತಾಯಗೊಂಡಿದ್ದು, ಮೂಲಭೂತ ಸೌಲಭ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಯಾರೇ ಸಮಸ್ಯೆ ಎಂದು ಬಂದರೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ ಎಂದರು.
ಕಾರ್ಯಕರ್ತರ ಹಾಗೂ ಬೆಂಬಲಿಗರ ಹಷೋದ್ದಾರ, ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ, ಬೊಮ್ಮಾಯಿ ಮತ್ತು ಅಶೋಕ್ ಪರ ಜೈಕಾರ ಮುಗಿಲು ಮುಟ್ಟಿತ್ತು. ಸುಡು ಬಿಸಿಲನ್ನು ಲೆಕ್ಕಿಸದೆ ಕಾರ್ಯಕರ್ತರು ಹೆಜ್ಜೆ ಹಾಕಿದರು.