ಪತ್ನಿಯ ಕುಟುಂಬಸ್ಥರಿಂದಲೇ ಗಂಡನ ಹತ್ಯೆ! ಪ್ರೀತಿಯ ಗಂಡನ ಬರ್ತ್​ ಡೇ ಸಂಭ್ರಮದಲ್ಲಿದ್ದವಳಿಗೆ ಆಘಾತ...

WhatsApp Image 2021-02-16 at 4.03.58 PM
Published on

ಬೆಂಗಳೂರು: ರಾಜಗೋಪಾಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲಗ್ಗೆರೆಯಲ್ಲಿ ಹಾಡಹಗಲೇ ನವವಿವಾಹಿತನೊಬ್ಬ ತನ್ನ ಪತ್ನಿಯ ಕುಟುಂಬಸ್ಥರಿಂದಲೇ ಬರ್ಬರವಾಗಿ ಕೊಲೆಯಾಗಿದ್ದಾನೆ.

ತುಮಕೂರು ಜಿಲ್ಲೆಯ ಹುಲಿಯೂರು ಗ್ರಾಮದ ಚೇತನ್ (25) ಕೊಲೆಯಾದವ. ಎರಡು ತಿಂಗಳ ಹಿಂದಷ್ಟೇ ಭೂಮಿಕಾ ಜತೆ ಮದುವೆ ಆಗಿದ್ದ ಚೇತನ್​, ಮದ್ವೆ ಬಳಿಕ ಬೆಂಗಳೂರಿನ ಲಗ್ಗೆರೆಯಲ್ಲಿ ಮನೆ ಮಾಡಿಕೊಂಡು ವಾಸವಿದ್ದ. ಚೇತನ್ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ. ಬರ್ತ್​ ಡೇ ಸಂಭ್ರಮದಲ್ಲಿದ್ದ ಚೇತನ್​ ಇಂದು ತನ್ನ ಪತ್ನಿಯ ಅಣ್ಣ ಮತ್ತು ಚಿಕ್ಕಪ್ಪನಿಂದಲೇ ಬರ್ಬರವಾಗಿ ಕೊಲೆಯಾಗಿದ್ದಾನೆ. ಇಷ್ಟಕ್ಕೆಲ್ಲ ಕಾರಣ ಏನು ಗೊತ್ತಾ? ಇದನ್ನೂ ಓದಿರಿ  ಕೊಳೆತ ಸ್ಥಿತಿಯಲ್ಲಿ ಪ್ರೇಮಿಗಳ ಶವ ಮರದಲ್ಲೇ ನೇತಾಡುತ್ತಿತ್ತು! ಬೆಚ್ಚಿಬಿದ್ದ ಸ್ಥಳೀಯರು

ಭೂಮಿಕಾ ಮತ್ತು ಚೇತನ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ​ಆದರೆ ಮನೆಯವರ ಬಲವಂತಕ್ಕೆ ವಿಜಯ್ ಎಂಬಾತನೊಂದಿಗೆ ಭೂಮಿಕಾ ಸಪ್ತಪದಿ ತುಳಿದಿದ್ದಳು. ಚಿಕ್ಕಪ್ಪ ನಂಜುಂಡೇಗೌಡ ಮತ್ತು ಅಣ್ಣ ಆಕಾಶ್ ಸೇರಿ ಭೂಮಿಕಾಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದರು. ಮದುವೆಯಾದ ಒಂದು ವಾರಕ್ಕೆ ವಿಜಯ್‌ನನ್ನು ಬಿಟ್ಟು ಚೇತನ್ ಜೊತೆ ಭೂಮಿಕಾ ಬಂದಿದ್ದಳು.

ಮೊದಲನೇ ಗಂಡನನ್ನ ಬಿಟ್ಟು ಚೇತನ್ ಜೊತೆ ಎರಡು ತಿಂಗಳ ಹಿಂದಷ್ಟೆ ಭೂಮಿಕಾ ಮದುವೆಯಾಗಿದ್ದಳು. ಇದಕ್ಕೆ ಭೂಮಿಕಾಳ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ತನ್ನ ತಂಗಿ ಬೇರೊಬ್ಬನನ್ನು ಮದ್ವೆ ಆಗಿದ್ದರೂ ಆಕೆಯನ್ನ ಕರೆದೊಯ್ದು ಮದ್ವೇ ಆಗಿ ಮರ್ಯಾದೆ ಕಳೆದಿದ್ದಾನೆ ಎಂದು ಆಕಾಶ್​ಗೆ ಚೇತನ್​ ಮೇಲೆ ಸಿಟ್ಟಿತ್ತು. ಇದೇ ಕಾರಣಕ್ಕೆ ತನ್ನ ಚಿಕ್ಕಪ್ಪನ ಜೊತೆ ಸೇರಿ ಕೊಲೆಗೆ ಆಕಾಶ್ ಪ್ಲಾನ್ ಮಾಡಿದ್ದ.

ಇಂದು ಚೇತನ್​ ಬರ್ತ್​ ಡೇ ಇತ್ತು. ಚೇತನ್​ಗೆ ವಿಶ್​ ಮಾಡೋ ನೆಪದಲ್ಲಿ ಭೂಮಿಕಾಳ ಅಣ್ಣ ಆಕಾಶ್​ ಮತ್ತು ಚಿಕ್ಕಪ್ಪ ನಂಜೇಗೌಡ ಹಾಗೂ ಮತ್ತೊಬ್ಬ ದೀಪಕ್ ಬಂದಿದ್ದರು. ಜತೆಗೆ ಕೇಕ್​ ಅನ್ನೂ ತಂದಿದ್ದರು. ಅಣ್ಣ, ಚಿಕ್ಕಪ್ಪ ಬಂದ ಖುಷಿಯಲ್ಲಿದ್ದ ಭೂಮಿಕಾಗೆ ಇವರೇ ತನ್ನ ಪ್ರಿಯಕರನ ಹಂತಕರಾಗ್ತಾರೆ ಎಂದು ಗೊತ್ತಿರಲಿಲ್ಲ. ಏನೋ ನೆಪ ಮಾಡಿ ಭೂಮಿಕಾಳನ್ನು ಹೊರ ಕಳುಹಿಸಿದ ಆರೋಪಿಗಳು ಚೇತನ್​ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಂದಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಪತ್ತೆಗೆ ಬಲೆ ಬೀಸಲಾಗಿದೆ ಎಂದು ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net