

ರಾಯಚೂರು: ಗ್ರಾಮ ಪಂಚಾಯಿತಿ ಚುನಾವಣೆಯ ಜಿದ್ದಿಗೆ ಈಗಾಗಲೇ ಹಲವರ ಸಾವು-ನೋವಿಗೆ ಕಾರಣವಾಗಿದೆ. ಇದೀಗ ಗ್ರಾಪಂ ಸದಸ್ಯೆಯ ಪುತ್ರನೇ ಬಲಿಯಾದ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ಲಿಂಗಸೂಗೂರು ತಾಲೂಕಿನ ಗುಡದನಾಳ ಗ್ರಾಮದ ಶರಣಬಸವ (28) ಕೊಲೆಯಾದ ದುರ್ದೈವಿ. ಈತನ ತಾಯಿ ಹನುಮಂತಮ್ಮ ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಕಳೆದ ಚುನಾವಣೆಯಲ್ಲೂ ತಾಯಿ ಗೆದ್ದಿದ್ದರು. ಇದನ್ನೂ ಓದಿರಿ ನಾಯಿ ಮೇಲೆ ಅತ್ಯಾಚಾರ! ಬೆಚ್ಚಿಬೀಳಿಸುತ್ತೆ ಮೈಸೂರಲ್ಲಿ ಕಾಮುಕನ ಪೈಶಾಚಿಕ ಕೃತ್ಯ
ಇತ್ತೀಚಿಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಶರಣಬಸವನ ಕುಟುಂಬದ ಬಳಿ ಚುನಾವಣೆಗೆ ಸ್ಪರ್ಧಿಸದಂತೆ ಕೇಳಿಕೊಂಡಿದ್ದ ಜಗದೀಶ ಕುಟುಂಬಸ್ಥರು, ಈ ಬಾರಿ ನಮಗೆ ಬಿಟ್ಟು ಕೊಡಿ ಎಂದಿದ್ದರು. ಇದಕ್ಕೆ ಒಪ್ಪದ ಶರಣಬಸವ ಚುನಾವಣೆಗೆ ಸ್ಪರ್ಧಿಸಿ ವಿಜೇತರಾಗಿದ್ದರು.
ಸೋಲಿನ ಸೇಡಿಗಾಗಿ ಕಾಯುತ್ತಿದ್ದ ಜಗದೀಶನ ಕಡೆಯವರು ಕೊಲೆ ಬೆದರಿಕೆ ಹಾಕಿದ್ದರು. ಸೋಮವಾರ ರಾತ್ರಿ ಗ್ರಾಪಂ ಸದಸ್ಯೆ ಹನುಮಂತಮ್ಮನ ಮನೆ ಬಳಿ ಬಂದ 10 ಜನರ ಗುಂಪೊಂದು ಮಾರಕಾಸ್ತ್ರದಿಂದ ದಾಳಿ ಮಾಡಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಶರಣಬಸವ ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಗ್ರಾಪಂ ಸದಸ್ಯೆ ಹನುಮಂತಮ್ಮ, ಅಮರೇಶ ಎಂಬುವರ ಮೇಲೂ ಹಲ್ಲೆ ಮಾಡಿದ್ದು, ಲಿಂಗಸಗೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 10 ಜನರ ವಿರುದ್ಧ ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.