

ಬೆಂಗಳೂರು: ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ಬೆಳೆಗಳನ್ನು ನಾಶ ಮಾಡಿದ ಮಿಡತೆಗಳ ಹಿಂಡು ಈಗ ಮಹಾರಾಷ್ಟ್ರದತ್ತ ನುಗ್ಗಿದ್ದು, ಸದ್ಯದಲ್ಲೇ ಕರ್ನಾಟಕಕ್ಕೂ ಕಾಲಿಡುವ ಸಾಧ್ಯತೆ ಬಲವಾಗಿದೆ.
ಈಗಾಗಲೇ ಮಹಾರಾಷ್ಟ್ರದ ವಿದರ್ಭಕ್ಕೆ ದಾಳಿ ಇಟ್ಟಿರುವ ಲಕ್ಷಾಂತರ ಮಿಡತೆಗಳು ಮಹಾರಾಷ್ಟ್ರದ ಸಮೀಪದಲ್ಲಿರುವ ಕರ್ನಾಟಕದ ಜಿಲ್ಲೆಗಳಿಗೂ ವ್ಯಾಪಿಸುವ ಅಪಾಯದ ಕುರಿತು ಕೃಷಿ ತಜ್ಞರು ಎಚ್ಚರಿಸಿದ್ದಾರೆ.
ಇವು ಕರ್ನಾಟಕವನ್ನು ಪ್ರವೇಶಿಸಬಾರದೆಂದಿದ್ದರೆ ಇವುಗಳನ್ನು ಮಹಾರಾಷ್ಟ್ರದಲ್ಲೇ ಅಲ್ಲಿನ ಸರ್ಕಾರ ಸಮರ್ಥವಾಗಿ ನಿಯಂತ್ರಿಸಬೇಕು. ಇಲ್ಲದಿದ್ದರೆ ಕರ್ನಾಟಕದ ರೈತರಿಗೂ ಆತಂಕ ತಪ್ಪಿದ್ದಲ್ಲ.
ಮೂಲತಃ ಪಾಕಿಸ್ತಾನದಿಂದ ರಾಜಸ್ಥಾನಕ್ಕೆ ಬಂದಿರುವ ಈ ಲಕ್ಷಾಂತರ ಮಿಡತೆಗಳು, ಈಗಾಗಲೇ ಹಲವಾರು ಹಳ್ಳಿಗಳಲ್ಲಿ ಬೆಳೆದು ನಿಂತಿದ್ದ ಬೆಳೆಯನ್ನು ನಾಶಪಡಿಸಿವೆ. ಅಲ್ಲಿಂದ ಆಂಧ್ರದ ಅಮರಾವತಿ ಮೂಲಕ ಮಹಾರಾಷ್ಟ್ರವನ್ನು ಪ್ರವೇಶಿಸಿವೆ. ಇಲ್ಲೆಲ್ಲ ಇವುಗಳ ನಿಯಂತ್ರಣಕ್ಕೆ ರಾಸಾಯನಿಕಗಳನ್ನು ಸಿಂಪಡಿಸಿದರೂ ಪ್ರಯೋಜನವಾಗಿಲ್ಲ.
ಪಾಕಿಸ್ತಾನಕ್ಕೆ ಸಮೀಪದಲ್ಲಿರುವ ಪಂಜಾಬ್ ಮತ್ತು ಅದಕ್ಕೆ ಹೊಂದಿಕೊಂಡಿರುವ ಹರಿಯಾಣದಲ್ಲೂ ಮಿಡತೆಗಳು ಹಾವಳಿ ಎಬ್ಬಿಸುವ ಸಾಧ್ಯತೆ ಇದೆ.