

ಹುಬ್ಬಳ್ಳಿ: 'ಬೆಟ್ಟದ ಹೂವು' ಚಿತ್ರದಲ್ಲಿ ಬಾಲಕಲಾವಿದನಾಗಿ ಗಮನ ಸೆಳೆದ ಪುನೀತ್ ರಾಜ್ಕುಮಾರ್, ಬೆಳೆದ ಮೇಲೆ ಜನ ಮೆಚ್ಚಿದ ಹೀರೋ ಆಗಿ ಕನ್ನಡಿಗರ ಪ್ರೀತಿ ಗಳಿಸಿದ್ದವರು. ಅಪ್ಪು ಎಂದೇ ಜನಪ್ರಿಯರಾಗಿದ್ದ ಅವರಿಗೆ ಎಷ್ಟೋ ಬಾಲ ಅಭಿಮಾನಿಗಳುಂಟು.
ಅಕಾಲಿಕವಾಗಿ ಇಹಲೋಕ ತೊರೆದುಹೋದ ಪವರ್ ಸ್ಟಾರ್ ಪುನೀತ್ ಅವರನ್ನು ನೆನೆದು ಧಾರವಾಡದ ಪುಟಾಣಿ ಅಭಿಮಾನಿಯೊಬ್ಬಳು ಕಣ್ಣೀರಿಟ್ಟಿದ್ದಾಳೆ. ಬಾಲಕಿಯ ಚಾಕಚಕ್ಯತೆ ಕಂಡು ಎರಡು ತಿಂಗಳ ಹಿಂದಷ್ಟೇ ಆಕೆಯನ್ನು ಮನೆಗೆ ಕರೆದು ಅಪ್ಪು ಸನ್ಮಾನ ಮಾಡಿದ್ದರು ಎಂದು ತಿಳಿದುಬಂದಿದೆ.
ಡಾ.ರಾಜ್ ಚಿತ್ರಗಳ ಹೆಸರುಗಳನ್ನು ನಿರರ್ಗಳವಾಗಿ ಹೇಳುವ ಬಾಲಕಿ, ಧಾರವಾಡ ಜಿಲ್ಲೆಯ ಕುಂದಗೋಳದ ನಿವಾಸಿ ಶ್ರೀಶಾ. ಅವಳ ರಾಜಕುಮಾರ್ ಬಗೆಗಿನ ಅಭಿಮಾನ ಕಂಡು ಪುನೀತ್ ಅವಳನ್ನು ಸತ್ಕರಿಸಿದ್ದರು. ಈಗ ಪುನೀತ್ ಸಾವಿನ ಸುದ್ದಿ ಕೇಳಿ ಕಣ್ಣೀರಿಟ್ಟಿರುವ ಶ್ರೀಶಾ, ಕಣ್ಣೀರಿಡುತ್ತಲೇ ಪುನೀತ್ ಅಭಿನಯದ ಎಲ್ಲಾ ಚಿತ್ರಗಳ ಹೆಸರುಗಳನ್ನು ಹೇಳಿ ವಿಡಿಯೋ ಮಾಡಿ ಸಂತಾಪ ಸೂಚಿಸಿದ್ದಾಳೆ.