

ರಾಯಚೂರು: ಜಿಲ್ಲೆಯಲ್ಲಿ ಪಡಿತರ ಸಾಮಗ್ರಿಗಳ ಕಳ್ಳಸಾಗಣೆ-ದುರ್ಬಳಕೆ ಮುಂದುವರಿದಿದ್ದು, ಈ ಅಕ್ರಮವನ್ನು ತಡೆಯಲು ಮುಂದಾದವರ ಮೇಲೆ ಹಲ್ಲೆ ಕೂಡ ನಡೆದಿದೆ. ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಈ ಪ್ರಕರಣ ನಡೆದಿದೆ.
ಪಡಿತರ ಕಳ್ಳಸಾಗಣೆ ತಡೆಯಲು ಮುಂದಾದ ನಕ್ಕುಂದಿಯ ಬಸವರಾಜ್ ಮೇಲೆ ಹಲ್ಲೆ ನಡೆದಿದ್ದು, ಕಳ್ಳಸಾಗಣೆಯ ಕಿಂಗ್ಪಿನ್ ಎನ್ನಲಾದ ವೀರಭದ್ರಪ್ಪ ಮತ್ತು ಗುಂಪಿನ ವಿರುದ್ಧ ಆರೋಪ ಹೊರಿಸಲಾಗಿದೆ.
ಪಡಿತರ ಕಳ್ಳಸಾಗಣೆ ವಿರುದ್ಧ ದನಿ ಎತ್ತಿದ್ದ ಬಸವರಾಜ್ ಬೈಕ್ನಲ್ಲಿ ಹೋಗುತ್ತಿದ್ದಾಗ ಮಾತುಕತೆಗೆಂದು ಕರೆದ ವೀರಭದ್ರಪ್ಪ ಕಡೆಯವರು ಹಲ್ಲೆ ಮಾಡಿದ್ದಲ್ಲದೆ, ಕೊಲೆ ಬೆದರಿಕೆಯನ್ನೂ ಒಡ್ಡಿದ್ದಾರೆ.
ಮಾನ್ವಿಯ ಆಲ್ದಾಳ್ ವೀರಭದ್ರಪ್ಪ ವಿರುದ್ಧ ಪಡಿತರ ಸಾಮಗ್ರಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಗಂಭೀರ ಆರೋಪವಿದೆ. ಅಪೌಷ್ಟಿಕ ಮಕ್ಕಳು ಹಾಗೂ ಮಹಿಳೆಯರಿಗೆ ಹೋಗಬೇಕಿದ್ದ ಪೌಷ್ಟಿಕ ಆಹಾರದ ಅಕ್ರಮದಲ್ಲಿಯೂ ಇದೇ ವೀರಭದ್ರಪ್ಪನ ಹೆಸರು ಕೇಳಿಬಂದಿತ್ತು.
ಗಾಯಾಳು ಬಸವರಾಜ್ ನಕ್ಕುಂದಿಯನ್ನು ಮಾನ್ವಿಯ ತಾಲೂಕಾಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಹಲ್ಲೆ ಪ್ರಕರಣ ಜರುಗಿದೆ.