

ಬೆಂಗಳೂರು: ಮುಂದಿನ ಪೀಳಿಗೆಗಾಗಿ ಪರಿಸರವಾದಿ ಯಲ್ಲಪ್ಪರೆಡ್ಡಿ ಅವರ ಬರಹ, ಅನುಭವ, ಚಿಂತನೆ ಕುರಿತು ಒಳಗೊಂಡ ಸಮಗ್ರ ಕೃತಿ ರಚಿಸುವ ಅಗತ್ಯವಿದೆ ಎಂದು ಹೈಕೋರ್ಟ್ನ ವಿಶ್ರಾಂತ ನ್ಯಾ.ಎಚ್.ಎನ್. ನಾಗಮೋಹನ್ದಾಸ್ ಹೇಳಿದ್ದಾರೆ.
ಬೆಂಗಳೂರು ವಿಜ್ಞಾನ ವೇದಿಕೆ ಹಾಗೂಕೃಷಿ ಭಾರತ್ ಫೌಂಡೇಷನ್ ಸಹಯೋಗದಲ್ಲಿ ಜನ ಪ್ರಕಾಶನ, ಬವಸನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪರಿಸರವಾದಿ ಡಾ.ಅ.ನ.ಯಲ್ಲಪ್ಪ ರೆಡ್ಡಿ ರಚಿಸಿರುವ "ಮೇದಿನಿ ಜೊತೆ ನನ್ನ ಕಥೆ' ಪುಸಕ್ತ ಬಿಡುಗಡೆ ಮಾಡಿ ಮಾತನಾಡಿದರು.
"ಮೇದಿನಿ ಜೊತೆ ನನ್ನ ಕಥೆ' ಕೃತಿಯಲ್ಲಿ ಯಲ್ಲಪ್ಪ ರೆಡ್ಡಿಯ ಬದುಕಿನ ಅನುಭವದ ಒಂದು ಮಗ್ಗುಲು ಮಾತ್ರ ಇದೆ. ಹಾಗಾಗಿ, ಲೇಖಕರು ಲೋಕಾದಲತ್ನ ಅನುಭವವನ್ನು ಸಮಗ್ರ ಕೃತಿ ರಚಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡುವ ಅಗತ್ಯವಿದೆ.ನಾವೆಲ್ಲರೂ ಸಂಗೀತವನ್ನು ಆಲಿಸಿ,ನೃತ್ಯವನ್ನು ನೋಡುತ್ತೇವೆ. ಆದರೆ, ಯಲ್ಲಪ್ಪರೆಡ್ಡಿಯವರು ಸಾಗರ, ಸರೋವರ,ನದಿ,ಕಾಡು, ಗುಡ್ಡ ಮೂಲಕ ಸಂಗೀತ ಮತ್ತು ನೃತ್ಯವನ್ನು ಕಾಣುತ್ತಾರೆ. ಇಂತಹ ಅನೇಕ ಅನುಭವಗಳ, ಪ್ರಯೋಗಗಳ ಮುಂದಿನ ಪೀಳಿಗೆಗೆ ಬೇಕಾಗಿದೆ. ಹಾಗಾಗಿ, ಈ ಕೆಲಸ ತುರ್ತಾಗಿಯಾಗಬೇಕಿದೆ ಎಂದರು.
ಪರಿಸರ ತಜ್ಞ ನಾಗೇಶ ಹೆಗಡೆ ಮಾತನಾಡಿ,ಜ್ಷಾನಭಾರತಿ ಮೆಟ್ರೋ ಸುತ್ತಮುತ್ತ ನೈಸರ್ಗಿಕ,ಅಪ್ಪಟ ಸಾವಯವ ಮಣ್ಣು ತಯಾರಿಕೆಗೆ ಕಾರಣವಾಗಿದ್ದ ಯಲ್ಲಪ್ಪ ರೆಡ್ಡಿಯಿಂದ 1,200 ಎಕರೆ ಜೀವವೈವಿಧ್ಯ ಉದ್ಯಾನವನ ನಿರ್ಮಾಣವಾಯಿತು. ಪರಿಸರದೊಂದಿಗೆ ಬಹಳಷ್ಟು ಪ್ರೀತಿಯಿಂದ ನೋಡುವಂತಹ ಇಂತಹ ಪರಿಸರ ಪ್ರೇಮಿಯನ್ನು ನಾನು ನೋಡಿಲ್ಲ ಎಂದರು. ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ, ಹಿರಿಯ ಪತ್ರಕರ್ತ ರಂಗನಾಥ ಭಾರದ್ವಾಜ್, ಶಿಕ್ಷಣ ತಜ್ಞ ಡಾ. ಚಂದನ್ಗೌಡ, ಫೌಂಡೇಷನ್ ಎಂಡಿ ಟಿ.ಸಿ.ರವೀಂದ್ರ, ಪ್ರಕಾಶಕ ಬಿ.ರಾಜಶೇಖರಮೂರ್ತಿ ಮತ್ತಿತರರಿದ್ದರು.