

ಬೆಂಗಳೂರು:ಪ್ರಯಾಣಿಕರಿಗೆ ಗುಣಮಟ್ಟ ಸೇವೆ ನೀಡಬೇಕೆಂಬ ಉದ್ದೇಶದಿಂದ ಬಿಬಿಎಂಪಿ ಸಹಯೋಗದಲ್ಲಿ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್ಆರ್) ನಿಧಿ ಬಳಸಿಕೊಂಡು ಶಿಲ್ಪಾ ಫೌಂಡೇಷನ್, 1.30 ಕೋಟಿ ರೂ. ವೆಚ್ಚದಲ್ಲಿ ರಾಜಧಾನಿಯ 3 ಕಡೆಗಳಲ್ಲಿ ಉಚಿತವಾಗಿ ನಿರ್ಮಿಸಿರುವ "ಸ್ಮಾರ್ಟ್ ನಿಲ್ದಾಣ' ಲೋಕಾರ್ಪಣೆಗೆ ಸಿದ್ಧವಾಗಿದೆ.
2024ರ ಜನವರಿಯಲ್ಲಿ ಪ್ರಾಯೋಗಿಕವಾಗಿ ಕೆ.ಆರ್.ವೃತ್ತ, ಅಡುಗೋಡಿ, ಕಾಡುಬೀಸನಹಳ್ಳಿನಲ್ಲಿ "ಸ್ಮಾರ್ಟ್ನಿಲ್ದಾಣ' ಕಾಮಗಾರಿ ಕೈಗೆತ್ತಿಗೊಂಡಿದ್ದು, ನಿರ್ಮಾಣ ಹಂತದ ಕಾಮಗಾರಿಗಳು ಈಗಾಗಲೇ ಮುಗಿದಿದ್ದು, ಮಾಸಾಂತ್ಯ ವೇಳೆಗೆ ಸಾರ್ವಜನಿಕರ ಸೇವೆಗೆ ಸ್ಮಾರ್ಟ್ ನಿಲ್ದಾಣ ಮುಕ್ತವಾಗಲಿದೆ. ಪ್ರತಿ ನಿಲ್ದಾಣಕ್ಕೆ 43 ಲಕ್ಷ ರೂ.ತಗಲಿದ್ದು, ಮೂರು ನಿಲ್ದಾಣಕ್ಕೆ 1.30 ಕೋಟಿ ರೂ.ಆಗಿದೆ. ಸ್ಮಾರ್ಟ್ ನಿಲ್ದಾಣದಲ್ಲಿ 360 ಡಿಗ್ರಿ ಸಿಸಿ ಕ್ಯಾಮರಾ, ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಮೊಬೈಲ್, ಲಾಪ್ಟಾಪ್ ಚಾರ್ಜರ್, ಸ್ನಾ$ಕ್ ವೆಂಡರ್ ಮಿಷಿನ್, ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಷಿನ್, ಹಸಿ, ಒಣ ಕಸ ಹಾಕುವ ಡಬ್ಬಿ, ಬಸ್ಗಳು ಸಾಗುವ ಮಾರ್ಗದ ಫಲಕ, ಗುಣಮಟ್ಟ ಅಸನಗಳು, ಕುಡಿಯುವ ನೀರು, ವಿದ್ಯುದ್ವೀಪ, ಸರ್ಕಾರದ ಯೋಜನೆಗಳ ವಿವರ ಮತ್ತು 4 ಡಿಸ್ಪ್ಲೇಗಳು ಸೇರಿ ಇತರೆ ಸೌಲಭ್ಯಗಳಿವೆ. ಇದನ್ನು ಸಂಸ್ಥೆಯೇ ನಿರ್ವಹಣೆ ಮಾಡಲಿದೆ. ಹಂತ ಹಂತವಾಗಿ ನಗರದ ಇತರ ಕಡೆಗಳಲ್ಲೂ ಉಚಿತವಾಗಿ ಸ್ಮಾರ್ಟ್ ನಿಲ್ದಾಣ ನಿರ್ಮಿಸುವ ಗುರಿಯನ್ನು ಶಿಲ್ಪಾ ಫೌಂಡೇಷನ್ ಹಾಕಿಕೊಂಡಿದೆ. ಈ ಮೂಲಕ ರಾಜಧಾನಿಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಆರಂಭಿಸಿದ "ಬ್ರ್ಯಾಂಡ್ ಬೆಂಗಳೂರು' ಯೋಜನೆಗೂ ಬಲ ನೀಡಿದಂತಾಗಿದೆ.
ಮಹಿಳೆಯರ ಸುರಕ್ಷತೆಗೆ ವಿಶೇಷ ಒತ್ತು: ಸ್ಮಾರ್ಟ್ ನಿಲ್ದಾಣದಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳ ಸುರಕ್ಷತೆಗೆ ವಿಶೇಷ ಒತ್ತು ನೀಡಲಾಗಿದೆ. ಇದಕ್ಕಾಗಿ ನಿಲ್ದಾಣದಲ್ಲಿ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಕಾಲೇಜಿಗೆ ಅಥವಾ ಕೆಲಸಕ್ಕೆ ತೆರಳಲು ಬಸ್ಗಾಗಿ ಕಾಯುತ್ತಿರುವ ಹೆಣ್ಣು ಮಕ್ಕಳು, ಮಹಿಳೆಯರು, ನಿಲ್ದಾಣದಲ್ಲಿ ಕಿಡಿಗೇಡಿಗಳಿಂದ ಅನುಚಿತ ವರ್ತನೆ, ಲೈಂಗಿಕ ಕಿರುಕುಳಕ್ಕೆ ಒಳಗಾದರೆ ಪ್ಯಾನಿಕ್ ಬಟನ್ ಒತ್ತಿದರೆ ತಕ್ಷಣ ಸ್ಥಳಿಯ ಪೊಲೀಸ್ ಠಾಣೆಗೆ ಮಾಹಿತಿ ರವಾನೆಯಾಗಲಿದೆ. ಸಂಬಂಧಪಟ್ಟ ಪೊಲೀಸರು ಕಾರ್ಯಪ್ರವೃತರಾಗಿ 10 ನಿಮಿಷದೊಳಗೆ ಸ್ಥಳಕ್ಕೆ ಧಾವಿಸಿ ರಕ್ಷಣೆ ಮಾಡಲಿದ್ದಾರೆ. ಹಾಗಾಗಿ, ಹಗಲು ಅಥವಾ ರಾತ್ರಿ ವೇಳೆ ಯಾವುದೇ ಭಯವಿಲ್ಲದೆ ನಿಲ್ದಾಣದಲ್ಲಿ ಬಸ್ಗಾಗಿ ಕಾಯಬಹುದು.
ಬಿಬಿಎಂಪಿಯು ಮುಂದಾಗಲಿ: ವಿಶ್ವದಲ್ಲೇ ಬೆಂಗಳೂರು ಮಾಹಿತಿ ತಂತ್ರಜ್ಞಾನ ನಗರವೆಂದು ಕರೆಯಲಾಗುತ್ತದೆ. ಆದರೆ, ಸಿಲಿಕಾನ್ ಸಿಟಿಯಲ್ಲಿ ಶೇ.80 ಬಸ್ ತಂಗುದಾಣ ಬಳಕೆಗಿಂತ ನಿರುಪಯುಕ್ತವಾಗಿವೆ. ನಿರ್ವಹಣೆ ಕೊರತೆಯಿಂದ ನುಲುಗಿವೆ.ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿ ಅನುದಾನದಡಿ ನಿರ್ಮಿಸಲಾಗಿರುವ ಕೆಲ ತಂಗುದಾಣಗಳು ಪ್ರಯಾಣಿಕರ ಉಪಯೋಗಕ್ಕೆ ಬಾರದೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ. ಜನಪ್ರತಿನಿಧಿಗಳ ಅನುದಾನದಡಿ ನಿರ್ಮಿಸಿರುವ ಕೆಲ ತಂಗುದಾಣಗಳು ಜಾಹೀರಾತು ಪ್ರದರ್ಶನಕ್ಕೆ ಹಾಗೂ ಹಣ ಲೂಟಿ ಹೊಡೆಯುವುದಕ್ಕೆ ಸೀಮಿತವಾಗಿವೆ. ಕೆಲ ಬಸ್ ಶೆಲ್ಟರ್ಗಳು ಕಸದ ತೊಟ್ಟಿಗಳಾದರೆ, ರಾತ್ರಿ ವೇಳೆ ದುಷ್ಕರ್ಮಿಗಳು ಮದ್ಯ ಸೇವಿಸಿ ಬಿಸಾಡಿರುವ ಪ್ಯಾಕೇಟ್ಗಳು ಅಲ್ಲೆಲ್ಲಿ ಕಂಡುಬಂದಿವೆ. ಪ್ರಯಾಣಿಕರಿಗೆ ಕುಳಿತುಕೊಳ್ಳಲು ಮಾಡಿದ ಅಸನಗಳು ನೆಲಸಮವಾಗಿವೆ. ನಿಲ್ದಾಣದ ಮೇಲ್ಛಾವಣಿಯ ಸಿಮೆಂಟ್ ಪದರು ಕಳಚಿ ಬೀಳುತ್ತಿವೆ. ಛಾವಣಿಯ ಕಬ್ಬಿಣದ ರಾಡ್ಗಳು ಹೊರಗಡೆ ಕಾಣುತ್ತಿವೆ. ಇದರಿಂದಾಗಿ ಜನರು ನಿಲ್ದಾಣದ ಒಳಗೆ ನಿಲ್ಲಲು ಹಿಂಜರಿಯುತ್ತಿದ್ದಾರೆ. ಭಿತ್ತಿ ಪತ್ರಗಳನ್ನು ಅಂಟಿಸಿ ಹಾಳು ಮಾಡುತ್ತಿರುವುದು ಒಂದೆಡೆಯಾದರೆ ಕೆಲವೆಡೆ ಮಹಿಳೆಯರು,ಹೆಣ್ಣು ಮಕ್ಕಳು ಮುಜುಗರ ಪಡುವಂತಹ ಚಿತ್ರಗಳು ಅಂಟಿಸಲಾಗಿದೆ. ಹಾಗಾಗಿ, ನಗರದ ಬಹುತೇಕ ತಂಗುದಾಣಗಳು ಶಿಥಿಲಾವಸ್ಥೆಗೆ ತಲುಪಿವೆ. ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ಪಾಲಿಕೆ, ಖಾಸಗಿ ಸಂಸ್ಥೆಗಳ ಸಹಯೋಗ ಪಡೆದು "ಸ್ಮಾರ್ಟ್ ನಿಲ್ದಾಣ' ನಿರ್ಮಿಸಿದರೆ ನಗರಕ್ಕೆ ಗರಿಮೆ ದೊರೆಯುವ ಜತೆಗೆ ಪ್ರಯಾಣಿಕರಿಗೂ ಗುಣಮಟ್ಟ ಸೇವೆ ನೀಡಿದಂತಾಗಲಿದೆ.
| ಅಚ್ಚುತ್ಗೌಡ. ಶಿಲ್ಪಾ ಫೌಂಡೇಷನ್ ಸಂಸ್ಥಾಪಕ.