

ಬೆಂಗಳೂರು: ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ 4 ಎಕರೆ ಜಾಗ ನೀಡುವ ಸಂಬಂಧ ಪರಿಶೀಲನೆ ನಡೆಸಿ ವರದಿ ನೀಡುವಂತೆ ಉನ್ನತ ಶಿಕ್ಷಣ ಇಲಾಖೆಯು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದೆ.
ಬೆಂಗಳೂರು ವಿವಿ ಕ್ಯಾಂಪಸ್‌ನಲ್ಲಿ ತನ್ನ ಪ್ರಾದೇಶಿಕ ಕಚೇರಿ ಸ್ಥಾಪನೆಗೆ 4 ಎಕರೆ ಜಮೀನು ಮಂಜೂರು ಮಾಡುವಂತೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಧಿಕಾರಿಗಳು ಉನ್ನತ ಶಿಕ್ಷಣ ಇಲಾಖೆಗೆ ಕಳೆದ ಫೆಬ್ರವರಿಯಲ್ಲಿ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಮನವಿ ಉಲ್ಲೇಖಿಸಿ ಬೆಂಗಳೂರು ವಿವಿ ಕುಲಸಚಿವರಿಗೆ ಪತ್ರ ಬರೆದಿರುವ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಾದೇಶಿಕ ಕೇಂದ್ರಕ್ಕೆ ವಿವಿಯ ಭೂಮಿ ನೀಡುವ ಸಂಬಂಧ ನಿಯಮಾನುಸಾರ ಪರಿಶೀಲನೆ ನಡೆಸಿ ಅಭಿಪ್ರಾಯದೊಂದಿಗೆ ವರದಿ ಸಲ್ಲಿಸಲು ಪತ್ರದಲ್ಲಿ ಸೂಚಿಸಿದ್ದಾರೆ.
ಈಗಾಗಲೇ ಬೆಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆ, ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿವಿ, ನ್ಯಾಕ್, ಐಸೆಕ್, ಕೆಂಪೇಗೌಡ ಅಧ್ಯಯನ ಕೇಂದ್ರ, ಪೊಲೀಸ್ ಠಾಣೆ, ಯುಜಿಸಿ ಸೇರಿ ಅನೇಕ ಸಂಸ್ಥೆಗಳಿಗೆ ನೂರಾರು ಎಕರೆ ಜಮೀನು ನೀಡಿದೆ. ಇದೀಗ ಇನ್ನೂ 4 ನಾಲ್ಕು ಎಕರೆ ನೀಡಲು ಮನವಿ ಬಂದಿದೆ.